ಸಂಸ್ಕೃತ ಭಾಷೆಯಲ್ಲಿರುವ ಆಯುರ್ವೆದ ಚಿಕಿತ್ಸಾ ಪದ್ದತಿಯ ಪ್ರಮುಖ ಅಂಶಗಳ ಸಂಶೋಧನೆ ಅಗತ್ಯ: ಡಾ. ಜಯರಾಜ

ವಿಜಯಪುರ: ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಅಡಕವಾಗಿರುವ ಪ್ರಮುಖ ಅಂಶಗಳನ್ನು ಸಂಸ್ಕೃತ ಭಾಷೆಯಲ್ದಿದ್ದು, ಅವುಗಳನ್ನು ಇಂದಿನ ಜನರಿಗೆ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ತಲುಪಿಸಲು ಸಂಶೋಧನೆಗಳನ್ನು ನಡೆಸಬೇಕು ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಹೇಳಿದ್ದಾರೆ.


ಬಿ.ಎಲ್.ಡಿ.ಇ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯದಲ್ಲಿ ಅನುಸಂಧಾನ-2023 ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಯುರ್ವೇದ ಭಾರತೀಯರು ವೈದ್ಯಕೀಯ ಕ್ಷೇತ್ರಕ್ಕೆ ನೀಡಿರುವ ಪ್ರಮುಖ ಕೊಡುಗೆಯಾಗಿದೆ. ಆದರೆ, ಆಯುರ್ವೇದ ವೈದ್ಯ ಪದ್ಧತಿಯ ಚಿಕಿತ್ಸಾ ವಿಧಾನಗಳು ಮತ್ತು ಪ್ರಮುಖ ಅಂಶಗಳು ಸಂಸ್ಕೃತ ಭಾಷೆಯಲ್ಲಿವೆ. ಅವುಗಳನ್ನು ಜನಸಾಮಾನ್ಯರಿಗೂ ತಲುಪಿಸುವಂತಾಗಬೇಕು. ಇದರಿಂದ ಈ ಕ್ಷೇತ್ರದಲ್ಲಿ ಮತ್ತಷ್ಟು ಸಂಶೋಧನೆ ಮಾಡಲು ಅನುಕೂಲವಾಗುತ್ತದೆ. ಆಯುರ್ವೇದದ ಅನುಭವದಿಂದ ವನಸ್ಪತಿ ಮತ್ತು ದ್ರವ್ಯ ಸಂಶೋಧನೆಗೆ ಹೊಸ ಸಂಶೋಧನೆಗಳನ್ನು ಸಮಾಜಕ್ಕೆ ಪರಿಚಯಿಸುವುದು ಸಂಶೋಧಕರ ಮುಖ್ಯ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.
ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಡಾ. ಜಗನ್ನಾಥ ಕೋನರೆಡ್ಡಿ ಮಾತನಾಡಿ, ಯುವ ವೈದ್ಯರು ಭವಿಷ್ಯದಲ್ಲಿ ಸಂಶೋಧನೆ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು ಏನೆಲ್ಲಾ ಸಾಧನೆ ಮಾಡಬಹುದು. ಸಂಶೋಧನೆ ಕ್ಷೇತ್ರಗಳಲ್ಲಿ ಇರುವ ಅವಕಾಶಗಳ ಕುರಿತು ಮಾಹಿತಿ ನೀಡಿದರು.


ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ಮಾತನಾಡಿ, ಆಯುರ್ವೇದ ಗ್ರಂಥಗಳಲ್ಲಿರುವ ಆಪ್ತೋಪದೇಶ ವಿಷಯಗಳನ್ನು ಬಳಸಿಕೊಂಡು ವೈಜ್ಞಾನಿಕ ಪದ್ದತಿಯಲ್ಲಿ ಅಳವಡಿಸಿಕೊಳ್ಳಬಹುದು. ಅಲ್ಲದೇ, ಪುರಾತನ ವೈಜ್ಞಾನಿಕ ಪದ್ದತಿಯನ್ನು ಆಧುನಿಕ ಯುಗದಲ್ಲಿ ಸಂಶೋಧನೆಗೆ ಬಳಸಿಕೊಂಡು ನಾನಾ ರೋಗಗಳಿಗೆ ವಿನೂತನ ಚಿಕಿತ್ಸೆ ನೀಡಬಹುದಾಗಿದೆ ಎಂದು ಉದಾಹರಣೆ ಸಹಿತ ಮಾಹಿತಿ ನೀಡಿದರು.
ದೇಶದ ನಾನಾ ರಾಜ್ಯಗಳಿಂದ ಆಯುರ್ವೇದ, ಯುನಾನಿ, ಹೋಮಿಯೋಪತಿ, ನರ್ಸಿಂಗ ಹಾಗೂ ಫಾರ್ಮಸಿ ವಿಭಾಗಗಳ ಪದವಿ, ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು, ಪಿ.ಎಚ್.ಡಿ ವಿದ್ಯಾರ್ಥಿಗಳು, ವೈದ್ಯರು ಸೇರಿದಂತೆ 450 ಕ್ಕೂ ಹೆಚ್ಚು ಸಂಶೋಧಕರು ಈ ವಿಚಾರ ಸಂಕಿರಣದಲ್ಲಿ ಪಾಲ್ಗೋಂಡಿದ್ದರು.


ಕಾರ್ಯಕ್ರಮದ ಮುಖ್ಯ ಆಯೋಜಕ ಡಾ. ಸತೀಶ ಪಾಟೀಲ ಸ್ವಾಗತಿಸಿದರು. ಡಾ. ರೇಣುಕಾ ತೆನಹಳ್ಳಿ ವಂದಿಸಿದರು. ಡಾ. ಅನೀಸ್ ಮತ್ತು ಡಾ. ಮಾನಸಾ ನಿರೂಪಿಸಿದರು.

Latest Indian news

Popular Stories