ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣು: ಜಿಲ್ಲೆಯಾದ್ಯಂತ 29 ಚೆಕ್ ಪೋಸ್ಟ್ ಸ್ಥಾಪನೆ

ಸಮಿ, ವಿಜಯಪುರ
ವಿಜಯಪುರ : ಲೋಕಸಭೆ ಚುನಾವಣೆ ಕಾವು ರಂಗೇರಿದೆ. ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಸಹ ಘೋಷಣೆ ಮಾಡಿದ್ದು, ಅಭ್ಯರ್ಥಿಗಳು ಈಗಾಗಲೇ ಸಕ್ರೀಯವಾಗಿ ಚುನಾವಣಾ ಪ್ರಚಾರದಲ್ಲಿಯೂ ಧುಮುಕಿದ್ದಾರೆ.
ಲೋಕಸಭೆ ಚುನಾವಣೆ ಸೂಸೂತ್ರವಾಗಿ ಹಾಗೂ ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಹ ಸಂಕಲ್ಪ ಮಾಡಿದ್ದು, ಯಾವುದೇ ರೀತಿಯ ಅಕ್ರಮಗಳು ನಡೆಯದಂತೆ ಕಟ್ಟುನಿಟ್ಟಿನ ನಿಗಾ ವಹಿಸಲು ಮುಂದಾಗಿದೆ.


ಚುನಾವಣೆ ಸಂದರ್ಭದಲ್ಲಿ ಅಕ್ರಮ ಹಣ ಸಾಗಾಟ, ಅಕ್ರಮವಾಗಿ ಮಧ್ಯ ಸಾಗಾಟ ಮಾಡಿ ಮತದಾರರನ್ನು ಆಮೀಷವೊಡ್ಡುವ ಅನೇಕ ವಿದ್ಯಮಾನಗಳು ನಡೆಯುವುದು ರೂಢಿ. ಇದನ್ನು ಸಂಪೂರ್ಣವಾಗಿ ಮಟ್ಟ ಹಾಕುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸರ್ಪಗಾವಲು ಹಾಕಿದೆ.


ಗಡಿಭಾಗದಲ್ಲಿ ಯಾವುದೇ ಕಾರಣಕ್ಕೂ ಅನಧಿಕೃತ ಹಣ, ಮಧ್ಯ ಸಾಗಾಟವಾಗದಂತೆ ಚೆಕ್ ಪೋಸ್ಟ್ ಮೂಲಕ ನಿಗಾ ವಹಿಸಿದೆ. ಎಲ್ಲೆಡೆ ಅತ್ಯಾಧುನಿಕ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ವಿಜಯಪುರ ಜಿಲ್ಲೆ ಗಡಿಭಾಗದಲ್ಲಿರುವುದರಿಂದ ಅನೇಕ ನೆರೆ ರಾಜ್ಯಗಳಿಗೂ ನಿಕಟ ಸಂಪರ್ಕ ಹೊಂದಿದೆ, ಹೀಗಾಗಿ ಅಲ್ಲಿಂದಲೂ ಸಹ ಈ ಅಕ್ರಮವಾಗಿ ವಸ್ತು, ನಗದು ನುಸುಳುದಂತೆ ಗಡಿ ಭಾಗದಲ್ಲಿಯೂ ಸಹ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ಪೊಲೀಸ್, ಕಂದಾಯ ಸೇರಿದಂತೆ ವಿವಿಧ ಇಲಾಖೆಯ ತಂಡಗಳು ವಿವಿಧ ಶಿಫ್ಟ್ಗಳಲ್ಲಿ 24*7 ಕರ್ತವ್ಯ ನಿರ್ವಹಣೆಯಲ್ಲಿ ತೊಡಗಿದ್ದಾರೆ.
ಜಿಲ್ಲಾಧಿಕಾರಿ ಟಿ. ಭೂಬಾಲನ್ ಜಿಲ್ಲೆಯ ವಿವಿಧ ಚೆಕ್ ಪೋಸ್ಟ್ ಗಳಿಗೆ ಧೀಡಿರ್ ಭೇಟಿ ನೀಡಿ ಪರಿಶೀಲನೆ ನಡೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಜಿಲ್ಲೆಯ ವಿ.ಸಿ. ರೂಂನಲ್ಲಿ ಸಿಸಿಕ್ಯಾಮೆರಾ ಫೂಟೇಜ್ಗಳ ಕಂಟ್ರೋಲ್ ರೂಂ ತೆರೆಯಲಾಗಿದ್ದು ಅಲ್ಲಿಯೂ ಸಹ ಅಧಿಕಾರಿಗಳ ತಂಡ ಸಿಸಿಕ್ಯಾಮೆರಾ ವೀಕ್ಷಣೆಯಲ್ಲಿ ತೊಡಗಿಸಿಕೊಂಡಿದೆ.


ಈಗಾಗಲೇ ಚೆಕ್ ಪೋಸ್ಟ್ ಗಳು ಗಂಭೀರವಾಗಿ ಕಾರ್ಯಾರಂಭಗೊಂಡಿರುವ ಪರಿಣಾಮ ಆರಂಭದಲ್ಲಿಯೇ ಕೋಟ್ಯಂತರ ರೂ. ಹಣ ಜಪ್ತಿ ಮಾಡಲಾಗಿದೆ. ಪ್ರಾಥಮಿಕ ಮಾಹಿತಿ ಅನ್ವಯ ಕಳೆದ ಕೆಲವು ದಿನಗಳ ಹಿಂದಷ್ಟೇ ಹೈದರಾಬಾದ್ನಿಂದ ಹುಬ್ಬಳ್ಳಿಗೆ ಸಾಗಾಟವಾಗುತ್ತಿದ್ದ 2.93 ಕೋಟಿ ರೂ., ಧೂಳಖೇಡ ಚೆಕ್ಫೋಸ್ಟ್ನಲ್ಲಿ 4 ಲಕ್ಷಕ್ಕೂ ಅಧಿಕ ರೂ. ನಗದು ಜಪ್ತು ಮಾಡಿಕೊಳ್ಳಲಾಗಿದೆ.

29 ಚೆಕ್ ಪೋಸ್ಟ್ ಸ್ಥಾಪನೆ:
ಜಿಲ್ಲೆಯಾದ್ಯಂತ ಒಟ್ಟು 17 ಅಂತರ್ ಜಿಲ್ಲಾ ಹಾಗೂ 12 ಅಂತರರಾಜ್ಯ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ. ಈ ಎಲ್ಲ ಚೆಕ್ ಪೋಸ್ಟ್ಗಳಲ್ಲಿ ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ಕೆಲವು ಚೆಕ್ ಪೋಸ್ಟ್ಗಳಲ್ಲಿ ಡ್ರೋನ್ ಕ್ಯಾಮೆರಾ ಮೂಲಕವೂ ನಿಗಾ ವಹಿಸಲಾಗುತ್ತಿದೆ. ಪ್ರವೇಶಿಸುವ ಎಲ್ಲ ವಾಹನಗಳನ್ನು ತಪಾಸಣೆಗೊಳಪಡಿಸಿಯೇ ಜಿಲ್ಲೆಯ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.


ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 3 ಚೆಕ್ ಫೋಸ್ಟ್ ಸ್ಥಾಪಿಸಲಾಗಿದ್ದು ಮುದ್ದೇಬಿಹಾಳ ಪಟ್ಟಣದ ಕನಕದಾಸ ಸರ್ಕಲ್, ತಂಗಡಗಿ, ಮಿಣಜಗಿ ಕ್ರಾಸ್, ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಗಡಿ ಸೋಮನಾಳ, ಬಸವನ ಬಾಗೇವಾಡಿಯಲ್ಲಿ 3 ಚೆಕ್ ಪೋಸ್ಟ್ ಸ್ಥಾಪನೆ ಮಾಡಲಾಗಿದ್ದು ಯಲಗೂರ ಕ್ರಾಸ್, ಅರಳದಿನ್ನಿ ಕ್ರಾಸ್, ಕೊಲ್ಹಾರ ಪಟ್ಟಣದಲ್ಲಿ ಚೆಕ್ ಪೋಸ್ಟ್ ಸ್ಥಾಪನೆಯಾಗಿದೆ. ಬಬಲೇಶ್ವರದಲ್ಲಿ ಅತೀ ಹೆಚ್ಚು ಅಂದರೆ 7 ಚೆಕ್ ಪೋಸ್ಟ್ ಸ್ಥಾಪಿಸಲಾಗಿದ್ದು ಯತ್ನಾಳ, ಕನಮಡಿ, ಅಳಗಿನಾಳ, ಹೊನವಾಡ, ಅರ್ಜುಣಗಿ, ಚಿಕ್ಕಗಲಗಲಿ, ಸಿದ್ಧಾಪೂರ ಎ ಗ್ರಾಮದಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ.


ವಿಜಯಪುರ ನಗರ ವ್ಯಾಪ್ತಿಯಲ್ಲಿ ಸಿಂದಗಿ ಬೈಪಾಸ್, ಸೊಲ್ಲಾಪೂರ ನಾಕಾ, ಜಮಖಂಡಿ ಕ್ರಾಸ್ನಲ್ಲಿ, ನಾಗಠಾಣ ಮತಕ್ಷೇತ್ರದಲ್ಲಿ ಶಿರಾಡೋಣ, ಕೊಂಕಣಗಾಂವ, ಉಮರಜ, ಉಮರಾಣಿ, ಧೂಳಖೇಡ ಭೀಮಾ ಬ್ರಿಡ್ಜ್, ಕಣಕನಾಳದಲ್ಲಿ ಚೆಕ್ಪೋಸ್ಟ್ ಸ್ಥಾಪಿಸಲಾಗಿದ್ದು, ಇಂಡಿ ಮತಕ್ಷೇತ್ರದಲ್ಲಿ ಅಗರಖೇಡ, ಹಿಂಗಣಿ, ಇಂಡಿ ನಾಕಾದಲ್ಲಿ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಮೋರಟಗಿ, ಗೋಲಗೇರಿ, ದೇವಣಗಾಂವದಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ.

ಸಿ-ವಿಜಿಲ್ ತಂತ್ರಾಶ:
ಚುನಾವಣೆಗೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗುವ ಪ್ರಕರಣಗಳು ಕಂಡು ಬಂದರೆ ಸಾರ್ವಜನಿಕರು ಸಹ ದೂರು ನೀಡುವ ಅವಕಾಶ ಕಲ್ಪಿಸಲಾಗಿದೆ. ಮೊಬೈಲ್ನಲ್ಲಿಸಿ-ವಿಜಿಲ್ ಎಂಬ ತಂತ್ರಾಶ ಡೌನ್ಲೋಡ್ ಮಾಡಿಕೊಂಡು ತಂತ್ರಾಶದ ಮೂಲಕವೇ ದೂರು ನೀಡುವ ಅವಕಾಶವನ್ನು ಆಯೋಗ ಕಲ್ಪಿಸಿದೆ.

Latest Indian news

Popular Stories