ಚಿತ್ರ: 17 ಮಂದಿ ಕುಟುಂಬಸ್ಥರನ್ನು ಕಳೆದು ಕೊಂಡ ನಾಸಿರ್
ವರದಿ: ಅಬ್ದುಲ್ಲಾ ಮಡಿಕೇರಿ
ವಯನಾಡಿನ ಮೇಪಾಡ್ ,ಮುಂಡ ಕೈ ಹಾಗೂ ಚೂರಲ್ಮಲ ಗ್ರಾಮಗಳನ್ನೆಲ್ಲ ಜಲ ಸಮಾಧಿ ಮಾಡಿದ ಭೀಕರ ಜಲಪ್ರಳಯದ ಪ್ರದೇಶದ ಭಯಾನಕ ಕಥೆಗಳು
ಭೂಕುಸಿತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಲು
ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ (HRS) ಕರ್ನಾಟಕ ರಾಜ್ಯದ ತಂಡದೊಂದಿಗೆ ಸೇರಿ ಕೊಂಡು ಗುರುವಾರ ಬೆಳಿಗ್ಗೆ 10 ಗಂಟೆ ಸಮಯಕ್ಕೆ ಘಟನಾ ಸ್ಥಳಕ್ಕೆ ತಲುಪುದೆವು. 15 ಕಿಲೋಮೀಟರ್ ಅಂತರದಲ್ಲೇ ಮೇಪಾಡ್ ಎಂಬ ಪ್ರದೇಶದಲ್ಲಿ ಸಂಭವಿಸಿದ ದುರಂತದ ಭೀಕರತೆ ಕಣ್ಣಿಗೆ ಗೋಚರಿಸುತ್ತಿತ್ತು.
ಸೈರನ್ ಗಳನ್ನು ಮೊಳಗಿಸುತ್ತಾ ಗಾಳಿಯ ವೇಗದಲ್ಲಿ ಮೃತ ಶರೀರಗಳನ್ನು ಹೊತ್ತು ತರುತ್ತಿರುವ ಆಂಬುಲೆನ್ಸ್ , ತರಾತುರಿಯಲ್ಲಿರುವ ಪೋಲಿಸರು, ಆರೋಗ್ಯ ಇಲಾಖೆಯ ವಾಹನಗಳ ಭರಾಟೆ ಎಲ್ಲವೂ ಅಲ್ಲಿ ನಡೆದ ದುರ್ಘಟನೆಯ ತೀವ್ರತೆಯನ್ನು ತಿಳಿಸುತ್ತಿತ್ತು.
ರುಂಡವಿಲ್ಲದ ಛಿದ್ರಗೊಂಡ ದೇಹಗಳು:
ಮೇಪಾಡ್ ಎಂಬ ಊರಿನ ಸರಕಾರಿ ಪ್ರೌಡ ಶಾಲೆಯ ವಿವಿಧ ಕೋಣೆಗಳಲ್ಲಿ ಸಂಬಂಧಿಕರು ಗುರುತು ಹಿಡಿಯದ ಮೃತ ಶರೀರಗಳು,ಮತ್ತೊಂದು ಕಡೆ ರುಂಡ ,ಮುಂಡ, ಹಾಗೂ ಕೈ ಕಾಲುಗಳು ಇಲ್ಲದ ಛಿದ್ರ ಗೊಂಡ ಅರ್ಧ ಶರೀರಗಳು. ಸಂಬಂಧಿಕರ ಆಕ್ರಂದನ ಇದೆಲ್ಲವನ್ನು ಗಮನಿಸಿದ ಕೂಡಲೇ ಮೈ ಜುಮ್ಮ್ ಎನಿಸಿತ್ತು!.
ಕಣ್ಣೀರು ಸುರಿಸಲು ಕುಟಂಬವೇ ಇಲ್ಲ:
ವಯನಾಡು ದುರಂತವು ಎಷ್ಟರ ಮಟ್ಟಿಗೆ ಭಯಾನಕವಾಗಿದೆ ಅಂದರೆ, ಕಾಫಿ,ಹಾಗೂ ಚಹಾ ತೋಟಗಳ ಮಧ್ಯೆ ಇರುವ ಪ್ರದೇಶದಲ್ಲಿ ಆ ಊರಿನವರು ಮಾತ್ರವಲ್ಲದೆ ದೂರದ ಅಸ್ಸಾಮ್ ಹಾಗೂ ಇನ್ನಿತರ ರಾಜ್ಯಗಳ ಐನೂರಕ್ಕೂ ಹೆಚ್ಚು ಕಾರ್ಮಿಕ ಜನರು ದುರಂತಕ್ಕೆ ಸಿಲುಕಿ ನಾಪತ್ತೆಯಾಗಿದ್ದಾರೆ. ಪುಟ್ಟ ಮಕ್ಕಳು,ಮಹಿಳೆಯರು ಹಿರಿಯರು ಸೇರಿದಂತೆ ತುಂಬು ಕುಟುಂಬಗಳನ್ನೇ ಪ್ರವಾಹ ನುಂಗಿ ಬಿಟ್ಟಿದೆ. ಅಳಲು ತಮ್ಮವರೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಶವಗಳು ಅನಾಥವಾಗಿ ಶವಗಾರದಲ್ಲಿ ಅಂತ್ಯಕ್ರಿಯೆಗಾಗಿ ಕಾಯುತ್ತಿರುವಂತೆ ಭಾಸವಾಗುತ್ತದೆ.
ಧರ್ಮ ಜಾತಿಯ ದ್ವೇಷಗಳನ್ನು ಮಣ್ಣು ಮುಕ್ಕಿಸಿದ ದುರಂತ!
ದ್ವೇಷ ಅಸೂಯೆ ಮತ್ತು ಜಾತಿ ಧರ್ಮಗಳ ಹೆಸರಲ್ಲಿ ನಡೆಯುತ್ತಿರುವ ರಕ್ತಪಾತ ,ವಯನಾಡಿನ ದುರಂತದಿಂದ ಪಾಠ ಕಲಿಯದಿದ್ದರೆ ನಾವು ಸುಧಾರಿಸಿಕೊಳ್ಳಲು ಮತ್ತೆಂದೂ ಸಾಧ್ಯವಿಲ್ಲ.
ಭೀಕರ ಪ್ರಳಯದಿಂದ ಬೃಹತ್ ಗಾತ್ರದ ಬಂಡೆ ಕಲ್ಲುಗಳು ಮತ್ತು ದೈತ್ಯಾಕಾರದ ಮರಗಳ ಹೊಡೆತದಿಂದ ಛಿದ್ರ ಗೊಂಡ ಮೃತ ದೇಹಗಳ ರುಂಡ ಮುಂಡಗಳು ಕೈ ಕಾಲುಗಳ ರಾಶಿಗಳು. ಮುಂಡ ವಿಲ್ಲದ ದೇಹಕ್ಕೆ ಇನ್ಯಾರದ್ದೋ ರುಂಡ, ರುಂಡ ವಿಲ್ಲದದವರಿಗೆ ಇನ್ಯಾರದ್ದೋ ಮುಂಡ ,ಹೀಗೆ ಕೈ,ಕಾಲುಗಳು ಬೇರೆ ಯಾರದ್ದೋ….ದ್ವೇಷ, ಹಗೆತನ, ಹಿರಿತನ, ಸಿರಿತನ ಎಲ್ಲವೂ ಇಲ್ಲಿ ಶೂನ್ಯವಾಗಿ ಗೋಚರಿಸುತ್ತಿದೆ.
ಸ್ವಯಂ ಸೇವಕ ತಂಡಗಳ ಶ್ಲಾಘನೀಯ ಕಾರ್ಯ!
ಒಂದು ಕಡೆ ಮೃತ ಶರೀರಗಳನ್ನು ಹೊತ್ತು ತರುತ್ತಿರುವ ನೂರಾರು ತುರ್ತು ವಾಹನಗಳು, ಇತರ ವಾಹನಗಳ ಓಡಾಟ, ಜೊತೆ ಹೆಚ್ಚಿದ ಜನಸಂದಣಿ ಇದನ್ನು ನಿಭಾಯಿಸಲು ಕೇವಲ ಪೋಲಿಸರಿಂದ ಸಾಧ್ಯವಿರಲಿಲ್ಲ. ವಿಶೇಷ ಬಂದೋ ಬಸ್ತ್ ಮಾಡಲೇ ಬೇಕು ಇಂತಹ ಸಂದರ್ಭದಲ್ಲಿ ಅವರಗೆ ಸಾಥ್ ನೀಡಿದ್ದು ಉತ್ಸಾಹಿ ತರುಣರು. ಕರ್ನಾಟಕ ಸೇರಿದಂತೆ ತಮಿಳು ನಾಡು ಕೇರಳದ ವಿವಿಧ ಭಾಗಗಳಿಂದ ಸಂತ್ರಸ್ತರ ಸೇವೆಗಾಗಿ ಆಗಮಿಸಿದ ಸಂಘ ಸಂಸ್ಥೆಗಳ ಕಾರ್ಯಕರ್ತರು ಸ್ವಯಂ ಪ್ರೇರಿತವಾಗಿ ಮುಂದೆ ಬಂದು ರಸ್ತೆ ಸಂಚಾರ ನಿಯಂತ್ರಿಸಲು ಸಹಕರಿಸುವ ದೃಶ್ಯ ಎಲ್ಲಡೆ ಸಾಮಾನ್ಯವಾಗಿತ್ತು.
ಬಂದವರಿಗೂ ನೊಂದವರ ಹೊಟ್ಟೆ ತುಂಬಾ ಆಹಾರ:
ಅಲ್ಲಿನ ಸರಕಾರ ಸ್ಥಾಪಿಸಿರುವ ಪರಿಹಾರ ಕೇಂದ್ರ , ಹಾಗೂ ಮೃತ ದೇಹಗಳ ದಾಸ್ತಾನು ಕೇಂದ್ರ ವಿರುವ ಮೇಪಾಡಿ ಎಂಬ ಸಣ್ಣ ನಗರದಿಂದ ದುರಂತ ನಡದೆ ಪ್ರದೇಶಕ್ಕೆ ತೆರಳುವ ದಾರಿಯುದ್ದಕ್ಕೂ ಬೆಳಗಿನ ಉಪಹಾರದಿಂದ ಪ್ರಾರಂಭಿಸಿ ರಾತ್ರಿ ಊಟವನ್ನು ಅಲ್ಲಿಗೆ ಬರುವಂತಹ ಸಂತ್ರಸ್ಥರು ಹಾಗೂ ರಕ್ಷಣಾ ಕಾರ್ಯಕರ್ತರಿಗೂ ವಿವಿಧ ಸಂಘ ಸಂಸ್ಥೆಗಳ ಮೂಲಕ ಉಚಿತ ಆಹಾರ ಪೊಟ್ಟಣಗಳ ವಿತರಣೆ, ಜೊತೆಗೆ ಅಲ್ಲಿನ ಮಸೀದಿಯೊಂದರಲ್ಲಿ ಅಲ್ಲೇ ಕುಳಿತು ಆಹಾರ ಸೇವಿಸಲು ವ್ಯವಸ್ಥೆ ಮಾಡಿದ್ದರು. ದಾರಿ ಯುದ್ದಕ್ಕೂ ಆಸು ಪಾಸಿನ ಮನೆಗಳ ಮುಂದೆ ಚಿಕ್ಕ ಪುಟ್ಟ ಹೊಟೆಲ್ ಮಾಲಿಕರು ವ್ಯಾಪಾರ ಬಿಟ್ಟು ದಾರಿಯಲ್ಲಿ ಹೋಗುವರನ್ನು ಕರೆದು ಚಹಾ ತಿಂಡಿ, ಕುಡಿಯಲು ನೀರು ನೀಡಿ ಉಪಚರಿಸುತ್ತಿದ್ದ ದೃಶ್ಯ ಕಂಡು ಬಂತು.
ಶಿವ ಕ್ಷೇತ್ರ ಮತ್ತು ಪೂಜಾರಿಯ ಮೃತದೇಹ:
ದುರಂತದಲ್ಲಿ ಮಂದಿರ ಮಸೀದಿ ಇಗರ್ಜಿ, ಶಾಲೆ ಎಲ್ಲವನ್ನೂ ಪ್ರವಾಹ ಜಲ ಸಮಾಧಿಗೊಳಿಸಿದೆ. ಆನೆ ನಡೆದ್ದದ್ದೇ ದಾರಿ ಎಂಬಂತೆ ನೀರು ರೌದ್ರವತಾರದೊಂದಿಗೆ ಎಲ್ಲವನ್ನು ತನ್ನೊಟ್ಟಿಗೆ ಕಸಿದು ಕೊಂಡು ಹೋಗಿದೆ. ಮುಂಡ ಕೈ ಎಂಬ ಪ್ರದೇಶ ಸೇತುವೆ ಸಮೀಪದಲ್ಲಿರುವ ಶಿವ ಕ್ಷೇತ್ರದ ಪೂಜಾರಿ ಎಂದಿನಂತೆ ಅಲ್ಲೆ ನಿದ್ರಿಸಿದ್ದರಂತೆ ಘೋರ ವಾದ ಶಬ್ದಕ್ಕೆ ಎಚ್ಚರವಾದಾಗ ಸೇತುವೆ ಸಮೇತ ಕುಸಿದು ಬಿದ್ದು ಕ್ಷೇತ್ರ ಮತ್ತು ಅಲ್ಲಿನ ಪ್ರದೇಶ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಎರಡು ದಿವಸದ ನಂತರ ಮೂವತೈದು ಕಿಲೋ ಮೀಟರ್ ದೂರದಲ್ಲಿ ದೇವಸ್ಥಾನದ ಪೂಜಾರಿಯವರ ಮೃತ ದೇಹ ಸಿಕ್ಕಿತು ಎಂದು ದುರ್ಘಟನೆಯಿಂದ ಪಾರಾದ ರಾಜು ದುಃಖತಪ್ತರಾಗಿ ವಿವರಿಸುತ್ತಾರೆ.
ಕಣ್ಣೆದುರೆ ಕಂಡ ದುರಂತ ಪಾರಾದ ಕನ್ನಡಿಗ ಕುಟುಂಬ!
ಸರಿ ಸುಮಾರು ಮೂವತ್ತು ವರುಷಗಳಿಂದ ಅಲ್ಲೇ ವಾಸವಿರುವ ಚಾಮರಾಜನಗರ ಜಿಲ್ಲೆಯ ಕುಟುಂಬವೊಂದು ಸ್ವಲ್ಪದರಲ್ಲೇ ಪಾರಾಗಿರುವ ಬಗ್ಗೆ ತಮ್ಮ ಭಯಾನಕ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಘಟನಾ ದಿನ ರಾತ್ರಿ ಸುಮಾರು 1-30 ಕ್ಕೆ ದನಗಳ ಕೊಟ್ಟಿಗೆಯಿಂದ ದನಗಳು ಭೀಕರವಾಗಿ ಕೂಗುವ ಶಬ್ದವನ್ನು ಕೇಳಿ ಧಾವಿಸಿದಾಗ ‘ಬೋ’ ಎಂಬ ಘೋರ ಶಬ್ದದೊಂದಿಗೆ ನೀರು ಹರಿದು ಕೊಟ್ಟಿಗೆ ಹತ್ತಿರ ತಲುಪಿತ್ತು. ಕೊಟ್ಟಿಗೆಯಿಂದ ದನಗಳನ್ನು ಕಟ್ಟಿ ಹಾಕಿದ ಹಗ್ಗಗಳನ್ನು ಬಿಚ್ಚಲು ಅಮ್ಮ ತಮ್ಮ, ಗಂಡು ಮಕ್ಕಳು ತೆರಳಿ ಇನ್ನೇನು ಹಗ್ಗದ ಗಂಟನ್ನು ಬಿಚ್ಚ ಬೇಕೇನ್ನುವಷ್ಟರಲ್ಲಿ ಎರಡನೇ ಜಲಪ್ರಳಯದ ನೀರಿನ ರಭಸ ಕೊಟ್ಟಿಗೆಯನ್ನೇ ಮುಳುಗಿಸಿ ಬಿಟ್ಟಿತು. ತಕ್ಷಣ ಅಮ್ಮನನ್ನು ಹೇಗೋ ಹೊರ ತಂದು ಕೊಟ್ಟಿಗೆಯ ಸೀಟನ್ನು ಒಡೆದು ಹೊರ ಓಡಿ ಮನೆ ಸೇರಿದಾಗ ಹೊಳೆ ಸೇತುವೆ ಮುರಿದು ಜಲ ಪ್ರವಾಹ ಮತ್ತಷ್ಟು ಹೆಚ್ಚಿ ಆ ಪ್ರದೇಶದ ಎಲ್ಲಾ ಮನೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿ ಆಗಿತ್ತು. ಆ ದುರಂತದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಮಹಿಳೆಯರು, ಹಿರಿಯರು,ಮಕ್ಕಳು ತಮ್ಮನ್ನು ರಕ್ಷಿಸಿ ಎಂಬ ಕೂಗು ಕೇಳುತ್ತಿತ್ತು. ಆದರೆ ಅವರನ್ನು ರಕ್ಷಿಸಲಾಗದ ಅಸಹಾಯಕ ಸ್ಥಿತಿಯಲ್ಲಿ ನಾವಿದ್ದೇವು ಎಂದು ಘಟನೆಯನ್ನು ನೆನೆದು ಕುಟುಂಬ ಸದಸ್ಯರು ಕಣ್ಣೀರಿಟ್ಟರು.
ಗೆಳಯನ ಅಗಲುವಿಕೆ:
ರಕ್ಷಣಾ ಕಾರ್ಯಚರಣೆ, ಸಮಾಜ ಸೇವೆ ನಿರತರಾದ ಪ್ರಶಾಂತ್ ಹಾಗೂ ಪ್ರಜೀಸ್ ಅಪಾಯಕಾರಿ ಪರಿಸ್ಥಿತಿಯಲ್ಲಿ ಇತರರನ್ನು ರಕ್ಷಿಸಲು ತೆರಳಿ ಪ್ರಾಣ ಕಳೆದು ಕೊಂಡಿದ್ದನ್ನು ವಿವರಿಸುವಾಗ ಪ್ರಶಾಂತ್ ಭಾವುಕರಾದರು. ಪ್ರಜೀಶ್ ಆ ಊರಿನವರಿಗೆ ಏನೇ ಕಷ್ಟಗಳು ಬಂದರೂ ಮುಂದೆ ನಿಂತು ನೆರವಾಗುತ್ತಿದ್ದ. ಕಳೆದ ಸಲ ಅದೇ ಪ್ರದೇಶದಲ್ಲಿ ಭೂ ಕುಸಿತ ಉಂಟಾದಾಗಲೂ ಗೆಳೆಯರೊಂದಿಗೆ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ. ಇಂದು ಕೂಡ ಪ್ರದೀಶ್ ಪ್ರಳಯದಿಂದ ಹೇಗೋ ಪಾರಾಗಿ ಬಿಟ್ಟಿದ್ದ. ಆದರೆ ಎರಡನೇ ಭೂ ಕುಸಿತದಿಂದ ಭಾರೀ ಶಬ್ಧದೊಂದಿಗೆ ಪ್ರದೇಶದಲ್ಲಿರುವ ಮನೆಗಳೆಲ್ಲ ಕೊಚ್ಚಿಕೊಂಡು ಬರುತ್ತಿರುವ ದೃಶ್ಯ, ಮಕ್ಕಳು, ಮಹಿಳೆಯರು ಪುರುಷರು ಆ ಪ್ರವಾಹದಲ್ಲಿ ಸಿಲುಕಿ ಯಾರಾದರೊಬ್ಬರು ನಮ್ಮನ್ನು ರಕ್ಷಿಸಿ ಎಂದು ಅಂತ ಅಂಗಲಾಚುತ್ತಿದ್ದ ದೃಶ್ಯ ನೋಡಿ ಪ್ರಜೀಶ್ ಹಿಂದೆ ಮುಂದೆ ನೋಡದೇ ಸಾಧ್ಯವಾದಷ್ಟು ಜನರನ್ನು ರಕ್ಷಿಸಿದ್ದ. ಪ್ರತ್ಯಕ್ಷ ದರ್ಶಿಗಳ ಹೇಳಿಕೆ ಪ್ರಕಾರ ಸುಮಾರು ನೂರು ಮಂದಿಯನ್ನು ರಕ್ಷಿಸಿ ದಡ ಸೇರಿಸಿದ್ದ ನಂತರ ನಿತ್ರಾಣಗೊಂಡ ಪ್ರಜೀಶ್ ನೀರಿನ ಸೆಳತಕ್ಕೆ ಸಿಲುಕಿ ಹುತಾತ್ಮನಾದ. ತನ್ನ ಕೈಯಲ್ಲಿದ್ದ ಟಾರ್ಚ್ ಮೇಲಕ್ಕೆ ಎತ್ತಿದ್ದು ಮಾತ್ರ ಕಂಡಿದೆ.ಮರುದಿನ ಪ್ರಜೀಶ್ ಮೃತ ದೇಹ ಸುಮಾರು ಮೂವತೈದು ಕಿಲೋ ಮೀಟರ್ ದೂರದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಯಿತು. ಹೌದು ತನ್ನ ಪ್ರಾಣದ ಹಂಗು ತೊರೆದು ಹಲವರನ್ನು ರಕ್ಷಿಸಿ ಆತ ಹುತಾತ್ಮನಾದ ಎಂದು ಗೆಳೆಯ ಮೌನಕ್ಕೆ ಶರಣಾದ.
ಅಳಿದುಳಿದ ಶಾಲಾ ಕಟ್ಟಡ ಸ್ಥಳಕ್ಕೆ ಭೇಟಿ ನೀಡಿದಾಗ ಕಲಿಸಿದ ವಿದ್ಯಾರ್ಥಿಗಳನ್ನು ನೆನೆದು ಕುಸಿದು ಬಿದ್ದ ಅಧ್ಯಾಪಕ!
ನಾನು ಯಾವಾಗಲೂ ಮಕ್ಕಳೊಂದಿಗೆ ಹೇಳುತ್ತಿದ್ದೆ ಮಕ್ಕಳೇ ನೀವೆಷ್ಟು ಭಾಗ್ಯವಂತರು ಅಲ್ವಾ? ಈ ಹಚ್ಚ ಹಸಿರು ಹರಿಯುವ ನದಿ ನೀರಿನ ಝರಿ, ಪ್ರಕೃತಿ ಸೌಂದರ್ಯದ ನಡುವೆ ನೀವು ಕಲಿಯುತ್ತಿದ್ದೀರಾ ಎಂದು, ಅಯ್ಯೋ ದೇವರೆ ಆ ಪುಟ್ಟ ಮಕ್ಕಳನ್ನು ಇನ್ನು ಎಲ್ಲಿ ನೋಡಲೀ….ಎಂದು ಬಿಕ್ಕಳಿಸುತ್ತಾ ಅತ್ತು ಕುಸಿದು ಬಿದ್ದ ಕ್ಷಣ. ನಾನು ಬರೆಯುತ್ತಿದ್ದ ಕೈಗಳು ಕೂಡ ನಡುಗಲಾರಂಭಿಸಿತು.
ನಾವು ಹಿಂತಿರುಗಿ ಬರುವವರೆಗೂ ಅರಣ್ಯ, ಕಾಡು, ತೋಟ, ಝರಿಗಳಲ್ಲಿ ವಿವಿಧ ತಂಡಗಳು ಛಿದ್ರಗೊಂಡ ದೇಹಗಳ ಹುಡುಕಾಟ ನಡೆಸುತ್ತಲೇ ಇದ್ದಾರೆ. ಅಗೆದಷ್ಟು ಅಂಗಾಂಗಗಳಿಲ್ಲದ ದೇಹಗಳು ಸಿಗುತ್ತಲೇ ಇದೆ. ದಣಿವರಿಯದ ಸ್ವಯಂ ಸೇವಕರ ನಿಷ್ಕಳಂಕ ಸೇವೆ ಮುಂದುವರಿದಿದೆ. ತುರ್ತು ವಾಹನಗಳ ಸೈರನ್ ಗಳು ಮೊಳಗುತ್ತಲೇ ಇದೆ..