ವಿಶ್ವಕಪ್ ಅರ್ಹತಾ ಪಂದ್ಯ: ವೆಸ್ಟ್ ಇಂಡೀಸ್ ಗೆ ಭಾರಿ ಶಾಕ್ ನೀಡಿದ ನೆದರ್ಲೆಂಡ್ಸ್!

ಹರಾರೆ: ಸೋಮವಾರ ಇಲ್ಲಿ ನಡೆದ ಐಸಿಸಿ ಪುರುಷರ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡದ ಆಲ್‌ರೌಂಡರ್ ಲೋಗನ್ ವ್ಯಾನ್ ಬೀಕ್ ಅವರ ಸೂಪರ್ ಓವರ್ ಅತ್ಯಮೋಘ ಮ್ಯಾಜಿಕ್ ನಿಂದಾಗಿ ವೆಸ್ಟ್ ಇಂಡೀಸ್ ಸತತ ಎರಡನೇ ಸೋಲನ್ನು ಅನುಭವಿಸಿತು.

ಈ ಸೋಲಿನಿಂದಾಗಿ ಎರಡು ಬಾರಿಯ ಮಾಜಿ ಚಾಂಪಿಯನ್‌ ಪ್ರತಿಷ್ಠಿತ ಪಂದ್ಯಾವಳಿಗೆ ಅರ್ಹತೆ ಪಡೆಯುವ ಅವಕಾಶವನ್ನು ಪಡೆಯಲು ಶ್ರೀಲಂಕಾ, ಓಮನ್ ಮತ್ತು ಸ್ಕಾಟ್‌ಲ್ಯಾಂಡ್‌ಗಳನ್ನು ಸೋಲಿಸಬೇಕಾಗುತ್ತದೆ.

ಹರಾರೆ ಥ್ರಿಲ್ಲರ್ ಪಂದ್ಯದಲ್ಲಿ ನೆದರ್ಲೆಂಡ್ಸ್ ಮತ್ತು ವೆಸ್ಟ್ ಇಂಡೀಸ್ ಎರಡೂ ತಂಡಗಳು 50 ಓವರ್‌ಗಳಲ್ಲಿ 374 ರನ್ ಗಳಿಸಿದ್ದು ವಿಶೇಷ. ಹೀಗಾಗಿ ಸೂಪರ್ ಓವರ್ ಅನಿವಾರ್ಯವಾಯಿತು.

ನೆದರ್ಲೆಂಡ್ಸ್ ನಾಯಕ ಸ್ಕಾಟ್ ಎಡ್ವರ್ಡ್ಸ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ವಿಂಡೀಸ್ ಪರ ಪೂರನ್ ಔಟಾಗದೆ 104 ರನ್ ಬಾರಿಸಿದರು. ಬ್ರಾಂಡನ್ ಕಿಂಗ್ 76, ಜೆ ಚಾರ್ಲ್ಸ್ 54, ಶಮರ್ ಬ್ರೂಕ್ಸ್ 25, ಶಾಯ್ ಹೋಪ್ 47, ಕೀಮೋ ಪಾಲ್ ಔಟಾಗದೆ 46 ರನ್ ಗಳಿಸಿ 6 ವಿಕೆಟ್ ನಷ್ಟಕ್ಕೆ 374 ಬೃಹತ್ ಮೊತ್ತ ಕಲೆ ಹಾಕಲು ನೆರವಾದರು.

ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್ ಪರ ಆಂಧ್ರ ಮೂಲದ ಬ್ಯಾಟಿಂಗ್ ಆಲ್ರೌಂಡರ್ ತೇಜ ನಿಡಮನೂರು ಅವರು ಭರ್ಜರಿ ಶತಕ ಸಿಡಿಸಿದರು. 76 ಎಸೆತಗಳಲ್ಲಿ 111 ರನ್ ಗಳಿಸಿದರು. ಸ್ಕಾಟ್ ಎಡ್ವರ್ಡ್ಸ್ 67, ಆರಂಭಿಕರಾದ ವಿಕ್ರಮಜಿತ್ ಸಿಂಗ್ 37, ಮ್ಯಾಕ್ಸ್ ಒಡೌಡ್ 36 ರನ್ ಗಳಿಸಿ ಔಟಾದರು. ವೆಸ್ಲಿ ಬ್ಯಾರೆಸಿ 27, ಬಾಸ್ ಡಿ ಲೀಡೆ 33 ಮತ್ತು ಲೋಗನ್ ವ್ಯಾನ್ ಬೀಕ್ 28 ರನ್ ಕೊಡುಗೆ ಸಲ್ಲಿಸಿ ಪಂದ್ಯದ ದಿಕ್ಕು ಬದಲಿಸಿದರು. 9 ವಿಕೆಟ್ ನಷ್ಟಕ್ಕೆ 374 ರನ್ ಗಳಿಸಿ ಪಂದ್ಯ ಸಮಬಲ ಮಾಡಿದರು.

ಸೂಪರ್ ಓವರ್ ನಲ್ಲಿ ಲೋಗನ್ ವ್ಯಾನ್ ಬೀಕ್ ಮ್ಯಾಜಿಕ್

ಸೂಪರ್ ಓವರ್ ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಮ್ಯಾಜಿಕ್ ಮಾಡಿದ ನೆದರ್ಲೆಂಡ್ಸ್ ಆಲ್‌ರೌಂಡರ್ ಲೋಗನ್ ವ್ಯಾನ್ ಬೀಕ್ ಸೂಪರ್ ಓವರ್‌ನಲ್ಲಿ ತಾರೆಯಾಗಿದ್ದು, ನೆದರ್ಲ್ಯಾಂಡ್ಸ್ ಐತಿಹಾಸಿಕ ಗೆಲುವು ದಾಖಲಿಸಿತು.

ಸೂಪರ್ ಓವರ್‌ನಲ್ಲಿ ಅನುಭವಿ ಹೋಲ್ಡರ್ ವಿರುದ್ಧ ಬ್ಯಾಟಿಂಗ್ ಮಾಡಲು ವ್ಯಾನ್ ಬೀಕ್ ಇಳಿದು ಅಬ್ಬರಿಸಿದರು. ನೆದರ್ಲೆಂಡ್ಸ್ ಸೂಪರ್ ಓವರ್‌ನಲ್ಲಿ 30 ರನ್ ಗಳಿಸಿತು. ಹೋಲ್ಡರ್ ಮೂರು ಸಿಕ್ಸರ್‌ಗಳು ಮತ್ತು ಮೂರು ಬೌಂಡರಿಗಳನ್ನು ಬಿಟ್ಟುಕೊಟ್ಟರು.

ಅನೇಕ ಜನರ ಆಶ್ಚರ್ಯಕ್ಕೆ, ಸೂಪರ್ ಓವರ್‌ನಲ್ಲಿ ವೆಸ್ಟ್ ಇಂಡೀಸ್ ಇನ್ನಿಂಗ್ಸ್‌ನಲ್ಲಿ ವ್ಯಾನ್ ಬೀಕ್ ಚೆಂಡನ್ನು ತೆಗೆದುಕೊಂಡು ಮತ್ತೊಮ್ಮೆ ಬೌಲಿಂಗ್ ದಾಳಿ ನಡೆಸಿದರು. ವ್ಯಾನ್ ಬೀಕ್ ಮೊದಲ ಮೂರು ಎಸೆತಗಳಲ್ಲಿ ಹೋಪ್ ಮತ್ತು ಚಾರ್ಲ್ಸ್ ಅವರನ್ನು ಕೇವಲ ಎಂಟು ರನ್‌ಗಳಿಗೆ ಸೀಮಿತಗೊಳಿಸಿದರು, ನಾಲ್ಕನೇ ಎಸೆತದಲ್ಲಿ ಚಾರ್ಲ್ಸ್ ಮತ್ತು ಹೋಲ್ಡರ್ ಅವರನ್ನು ಔಟ್ ಮಾಡುವ ಮೊದಲು ವೆಸ್ಟ್ ಇಂಡೀಸ್‌ನ ಸೂಪರ್ ಓವರ್ ಇನ್ನಿಂಗ್ಸ್ ಅನ್ನು 2 ವಿಕೆಟ್‌ಗೆ 8 ಕ್ಕೇ ಕೊನೆಗೊಳಿಸಿದರು, ಅವರ ತಂಡಕ್ಕೆ ಐತಿಹಾಸಿಕ ಜಯವನ್ನು ತಂದುಕೊಟ್ಟು ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದು ಹೀರೋ ಅನಿಸಿಕೊಂಡರು.

Latest Indian news

Popular Stories