ಈಶ್ವರಪ್ಪರನ್ನು ಬಿಜೆಪಿಗೆ ವಾಪಾಸ್ ಕರೆ ತರುತ್ತಿರುವ ವಿಚಾರ ನನಗೆ ಗೊತ್ತಿಲ್ಲ; BYR ಹೇಳಿಕೆ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪುತ್ರ ಕಾಂತೇಶ್ ಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿಲ್ಲವೆಂದು ಬಿಜೆಪಿ ನಾಯಕರ ವಿರುದ್ಧ ಮುನಿಸಿಕೊಂಡಿದ್ದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಯಡಿಯೂರಪ್ಪ ಪುತ್ರ ರಾಘವೇಂದ್ರ ವಿರುದ್ಧ ಸೆಡ್ಡು ಹೊಡೆದಿದ್ದರು.

ತಮ್ಮ ಪುತ್ರನಿಗೆ ಬಿಜೆಪಿ ಟಿಕೆಟ್ ಕೈ ತಪ್ಪಲು ಯಡಿಯೂರಪ್ಪನವರೇ ಕಾರಣವೆಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಈಶ್ವರಪ್ಪ, ಅಪ್ಪ – ಮಕ್ಕಳಿಗೆ ಬುದ್ಧಿ ಕಲಿಸುವ ಸಲುವಾಗಿ ನಾನು ಅವರ ಪುತ್ರನ ವಿರುದ್ಧ ಸ್ಪರ್ಧಿಸಿದ್ದೇನೆ ಎಂದಿದ್ದರು. ಈಶ್ವರಪ್ಪನವರಿಗೆ ಬಿಜೆಪಿಯ ಹಲವು ನಾಯಕರು ಸಹ ಪರೋಕ್ಷ ಬೆಂಬಲ ನೀಡಿದ್ದಾರೆ ಎಂಬ ಮಾತುಗಳು ಆ ಸಂದರ್ಭದಲ್ಲಿ ಕೇಳಿ ಬಂದಿದ್ದವು.

ಇದೀಗ ಲೋಕಸಭಾ ಚುನಾವಣೆಗೆ ಮತದಾನ ಮುಗಿದಿದ್ದು, ಈಶ್ವರಪ್ಪನವರನ್ನು ಮತ್ತೆ ಪಕ್ಷಕ್ಕೆ ಕರೆತರಲು ಕೆಲ ಬಿಜೆಪಿ ನಾಯಕರು ಉತ್ಸುಕರಾಗಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಹೈಕಮಾಂಡ್ ನಾಯಕರ ಜೊತೆಯೂ ಚರ್ಚೆ ನಡೆಸಲಾಗುತ್ತಿದ್ದು, ಇದರ ಮಧ್ಯೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಮಹತ್ವದ ಹೇಳಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಶ್ವರಪ್ಪನವರನ್ನು ವಾಪಸ್ ಪಕ್ಷಕ್ಕೆ ಕರೆತರಲು ಪ್ರಯತ್ನ ನಡೆಯುತ್ತಿರುವ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಇದನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದ ಬಿಜೆಪಿ ನಾಯಕರು ಗಮನಿಸಲಿದ್ದಾರೆ ಎಂದರಲ್ಲದೆ ಲೋಕಸಭಾ ಚುನಾವಣೆಯಲ್ಲಿ ತಾವು ಗೆಲ್ಲುವುದು ನಿಶ್ಚಿತ ಎಂದು ಹೇಳಿದರು.

Latest Indian news

Popular Stories