
ವಿದ್ಯುತ್ ಕೊರತೆ ವಿರುದ್ಧ ಪ್ರತಿಭಟನೆಗೆ ಮೊಸಳೆಯನ್ನೇ ಹಿಡಿದು ತಂದ ರೈತರು
ಹುಬ್ಬಳ್ಳಿ: ಅನಿಯಮಿತ ವಿದ್ಯುತ್ ಕಡಿತದಿಂದ ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗಿ ಸಿಡಿದೆದ್ದ ವಿಜಯಪುರ ಜಿಲ್ಲೆಯ ರೈತರು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ಕಚೇರಿಗೆ ಮೊಸಳೆಯನ್ನು ಹಿಡಿದು ತಂದು ಪ್ರತಿಭಟನೆ ನಡೆಸಿದ್ದಾರೆ.
ಹಗಲಿನಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದ ಕಾರಣ ರೈತರು ರಾತ್ರಿ ವೇಳೆ ಜಮೀನಿಗೆ ಹೋದಾಗ ಕಾಡುಪ್ರಾಣಿಗಳು, ಹಾವುಗಳ ಕಾಟದಿಂದ ಪರದಾಡುವಂತಾಗಿದೆ. ಕಳೆದ ವಾರ ರಾತ್ರಿ ವಿದ್ಯುತ್ ಸರಬರಾಜು ಮಾಡಿದ ನಂತರ ರೈತರೊಬ್ಬರು ತಮ್ಮ ಜಮೀನಿಗೆ ನೀರು ಹಾಕಲು ಹೋದಾಗ ತಮ್ಮ ಕೃಷಿ ಕ್ಷೇತ್ರದಲ್ಲಿ ದೊಡ್ಡ ಮೊಸಳೆಯನ್ನು ಕಂಡು ಬೆಚ್ಚಿಬಿದ್ದಿದ್ದರು.
ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮೊಸಳೆಯನ್ನು ಹಿಡಿದು ವಿದ್ಯುತ್ ಕೇಂದ್ರಕ್ಕೆ ತಂದು ಹೆಸ್ಕಾಂ ಸಿಬ್ಬಂದಿ ಬರುವರೆಗೂ ಠಿಕಾಣಿ ಹೂಡಿದ್ದರು. ತಮ್ಮ ಕಚೇರಿಯಲ್ಲಿ ಮೊಸಳೆಯನ್ನು ಕಂಡು ದಂಗಾದ ಹೆಸ್ಕಾಂ ಅಧಿಕಾರಿಗಳು ರಕ್ಷಣೆಗಾಗಿ ಪೊಲೀಸರು ಮತ್ತು ಅರಣ್ಯಾಧಿಕಾರಿಗಳನ್ನು ಕರೆ ಮಾಡಿದರು.
ಬಳಿಕ ಹಗಲು ಹೊತ್ತಿನಲ್ಲಿ ವಿದ್ಯುತ್ ಕಡಿತವಾಗದಂತೆ ನೋಡಿಕೊಳ್ಳುವುದಾಗಿ ಹೆಸ್ಕಾಂ ಅಧಿಕಾರಿಗಳು ಗ್ರಾಮಸ್ಥರಿಗೆ ಭರವಸೆ ನೀಡಿದರು. ನೀರಾವರಿ ಇಲಾಖೆಯ ಪ್ರಕಾರ, ಈ ವರ್ಷ ಅಲ್ಪ ಪ್ರಮಾಣದ ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಅಸ್ತವ್ಯಸ್ತವಾಗಿವೆ.
ಬೇಡಿಕೆ ಮತ್ತು ಬಳಕೆಯಲ್ಲಿ ತೀವ್ರ ಏರಿಕೆಯಿಂದಾಗಿ ಕರ್ನಾಟಕದಲ್ಲಿ ವಿದ್ಯುತ್ ಕೊರತೆಯಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಹೇಳಿದ್ದರು. ಅಕ್ಟೋಬರ್‌ನಲ್ಲಿ ವಿದ್ಯುತ್ ಬಳಕೆ ಸುಮಾರು 10,000 ಮೆಗಾವ್ಯಾಟ್ ಆಗಿದ್ದು, ಕೃಷಿ ಉದ್ದೇಶಗಳಿಗಾಗಿ ಹೆಚ್ಚಿದ ವಿದ್ಯುತ್ ಬಳಕೆಯಿಂದಾಗಿ ರಾಜ್ಯದಲ್ಲಿ 16,000 ಮೆಗಾವ್ಯಾಟ್‌ಗೆ ಏರಿಕೆಯಾಗಿದೆ.




