ಹಿಂದೂ ಜನಸಂಖ್ಯೆ ಕುಸಿತ ಆತಂಕಕಾರಿ ಬೆಳವಣಿಗೆ : ಪ್ರಹ್ಲಾದ ಜೋಶಿ

ಹುಬ್ಬಳ್ಳಿ, ಮೇ 10- ದೇಶದಲ್ಲಿ ಹಿಂದೂ ಜನಸಂಖ್ಯೆ ಕುಸಿತ ತೀವ್ರ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ ಜೋಶಿ ಕಳವಳ ವ್ಯಕ್ತಪಡಿಸಿದರು.ಹುಬ್ಬಳ್ಳಿಯಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಲೇ ಎಚ್ಚೆತ್ತುಕೊಂಡು ಪರ್ಯಾಯ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದರು.

ಭಾರತದಲ್ಲಿ ಹಿಂದೂಗಳ ಜನಸಂಖ್ಯೆ ಕ್ಷಿಣಿಸುತ್ತಿರುವ ಬಗ್ಗೆ ತಕ್ಷಣಕ್ಕೆ ಯಾವುದೇ ನಿರ್ಧಾರಕ್ಕೆ ಬರಲಾಗುವುದಿಲ್ಲ. ಆದರೆ, ಸಮಗ್ರ ಅಧ್ಯಯನ ನಡೆಸಬೇಕಿದೆ ಎಂದು ಅಭಿಪ್ರಾಯ ಪಟ್ಟರು. ಪ್ರಜಾಪ್ರಭುತ್ವಕ್ಕೆ ಧಕ್ಕೆ: ದೇಶದಲ್ಲಿ ಹಿಂದೂಗಳ ಜನಸಂಖ್ಯೆ ಕಡಿಮೆಯಾದಂತೆ ಕಾಲಕ್ರಮೇಣ ಪ್ರಜಾಪ್ರಭುತ್ವವೇ ಬದಲಾಗುವ ಸ್ಥಿತಿ ಎದುರಾಗಲಿದೆ. ಅಲ್ಲದೇ, ಜಾತ್ಯತೀತವಾಗಿ ಉಳಿಯುವುದಿಲ್ಲ ಎಂದು ಜೋಶಿ ತೀವ್ರ ಆತಂಕ ವ್ಯಕ್ತಪಡಿಸಿದರು.

ಜಗತ್ತಿನಲ್ಲೇ ಏಕೈಕ ಜಾತ್ಯತೀತ ರಾಷ್ಟ್ರ ಭಾರತ. ಪಕ್ಕಾ ಜಾತ್ಯತೀತ ದೇಶವಾಗಿದೆ. ಜಾತ್ಯತೀತತೆ ಎನ್ನುವುದು ಭಾರತೀಯರ ರಕ್ತ, ಸ್ವಭಾವದಲ್ಲೇ ಬಂದಿದೆ. ಮುಂದೊಂದು ದಿನ ಇದಕ್ಕೆ ಧಕ್ಕೆ ಉಂಟಾಗಬಹುದು ಎಂದರು.ಭಾರತ ವಿವಿಧತೆಯಲ್ಲಿ ಏಕತೆ ಕಂಡ ದೇಶವಾಗಿದೆ. ನಾನಾ ಧರ್ಮ, ಸಂಸ್ಕೃತಿ ಆಚರಣೆಗೆ ಮುಕ್ತ ಅವಕಾಶ ಕೊಟ್ಟ ರಾಷ್ಟ್ರ. ಈ ಪರಂಪರೆಯೆ ಮುಂದುವರಿಯಬೇಕು ಎಂದು ಸಚಿವ ಜೋಶಿ ಆಶಿಸಿದರು.

ಪ್ರಮುಖವಾಗಿ ಹಿಂದೂಗಳ ದೇಶವೆಂದರೂ ಸರ್ವ ಧರ್ಮೀಯರನ್ನು ಒಳಗೊಂಡಿದೆ. ಆದರೆ, ಈಗ ಹಿಂದೂಗಳ ಸಂಖ್ಯೆಯೇ ಕುಸಿಯುತ್ತಿದೆ ಎಂದರೆ ಸರ್ಕಾರ ಮತ್ತು ಸಮಾಜ ಗಂಭೀರವಾಗಿ ಚಿಂತಿಸಬೇಕಾದ ಸಂಗತಿ ಎಂದು ಜೋಶಿ ಎಚ್ಚರಿಸಿದರು.ಬಸವಣ್ಣನ ಕಲ್ಪನೆಯ ಸಮಾಜ ನಿರ್ಮಾಣ ಆಗಬೇಕು: ಪ್ರಜಾಪ್ರಭುತ್ವದ ರೂವಾರಿ, ಸಾಮಾಜಿಕ ಸಮಾನತೆಯ ಹರಿಕಾರ ಬಸವಣ್ಣ. ಇಂದು ಅವರ ಕಲ್ಪನೆಯ ಸಮಾಜ ನಿರ್ಮಾಣ ಮತ್ತು ಆಡಳಿತ ವ್ಯವಸ್ಥೆ ಬರಬೇಕಿದೆ ಎಂದು ಪ್ರಲ್ಹಾದ ಜೋಶಿ ಅವರು ಬಸವ ಜಯಂತಿಯ ಈ ಸಂದರ್ಭದಲ್ಲಿ ಪ್ರತಿಪಾದಿಸಿದರು.

Latest Indian news

Popular Stories