ಹೌತಿ ಬಂಡುಕೋರರು ಗಾಝಾದ ಮೇಲೆ ನಡೆಯುತ್ತಿರುವ ಇಸ್ರೇಲ್ ದಾಳಿಗೆ ಕದನ ವಿರಾಮಕ್ಕೆ ಒತ್ತಾಯಿಸಿ ವ್ಯಾಪಾರಿ ಹಡಗುಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಈ ದಾಳಿಯಿಂದಾಗಿ ಹಲವು ದೇಶಗಳ ವ್ಯಾಪಾರ ವಹಿವಾಟುಗಳ ಮೇಲೆ ತೀವ್ರ ಪರಿಣಾಮ ಎದುರಾಗುತ್ತಿದೆ.
ಕೆಂಪು ಸಮುದ್ರದಲ್ಲಿ ಸರಕು ಸಾಗಣೆ ನೌಕೆಗಳ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವ ಹೌತಿ ಬಂಡುಕೋರರ ಮೇಲೆ ಅಮೆರಿಕ ಮತ್ತು ಬ್ರಿಟನ್ ಪಡೆಗಳು ಶುಕ್ರವಾರ ರಾತ್ರೋರಾತ್ರಿ ದಾಳಿ ನಡೆಸಿವೆ. ಸಮುದ್ರದ ಮೂಲಕ ಮಾತ್ರವಲ್ಲದೇ ವೈಮಾನಿಕ ದಾಳಿಯನ್ನೂ ನಡೆಸಲಾಗಿದ್ದು, ಒಟ್ಟು 28 ಪ್ರದೇಶಗಳ 60 ಟಾರ್ಗೆಟ್‌ಗಳ ಮೇಲೆ ದಾಳಿ ನಡೆದಿತ್ತು.
ಆದರೆ ಇದಕ್ಕೆ ಪ್ರತೀಕಾರವಾಗಿ ಅಮೇರಿಕಾ ಒಡೆತನದ ಹಡಗಿನ ಮೇಲೆ ಹೌತಿಗಳು ಕ್ಷೀಪಣಿ ದಾಳಿ ನಡೆಸಿದ್ದಾರೆ.
ಸಂಘರ್ಷ ತೀವ್ರಗೊಳ್ಳುವ ಭೀತಿಯಿಂದ ಕೆಂಪು ಸಮುದ್ರದಲ್ಲಿ ಸಂಚರಿಸಬೇಕಿದ್ದ ಅನೇಕ ಟ್ಯಾಂಕರ್‌ಗಳು ಪಥ ಬದಲಿಸಿವೆ. ಬಹುರಾಷ್ಟ್ರೀಯ ನೌಕಾ ಪಡೆಗಳು ಕೂಡ ಬಾಲ್-ಅಲ್ ಮಂದಾಬ್ ಜಲಸಂಧಿ ಹಾಗೂ ಗಲ್ಫ್ ಆಫ್ ಆ್ಯಡೆನ್‌ನಿಂದ ದೂರವಿರುವಂತೆ ಎಲ್ಲ ಹಡಗುಗಳಿಗೂ ಸಂದೇಶ ರವಾನಿಸಿದೆ. ಜತೆಗೆ, ಕಚ್ಚಾ ತೈಲದ ದರವೂ ಶೇ.4.3ರಷ್ಟು ಏರಿಕೆಯಾಗಿ ಬ್ಯಾರೆಲ್‌ಗೆ 80 ಡಾಲರ್‌ಗೆ ಒಂದು ಹಂತದಲ್ಲಿ ತಲುಪಿತ್ತು.
ಇತ್ತೀಚೆಗಷ್ಟೇ ಹೌತಿ ಬಂಡುಕೋರರ ಮೇಲೆ ಪ್ರತೀಕಾರ ತೀರಿಸಿದ್ದ ಅಮೆರಿಕ, ಐವರು ಬಂಡುಕೋರರನ್ನು ಹತ್ಯೆಗೈದಿತ್ತು. ಇದಾದ ಬಳಿಕ, ಮತ್ತೂಂದು ಹಂತದ ಪ್ರಚೋದನೆ ಎಂಬಂತೆ ಗುರುವಾರ ತುರ್ಕಿಯೇ ಕಡೆಗೆ ಕಚ್ಚಾ ತೈಲ ಹೊತ್ತು ಹೊರಟಿದ್ದ ಟ್ಯಾಂಕರ್‌ವೊಂದನ್ನು ಇರಾನ್ ವಶಕ್ಕೆ ಪಡೆದಿತ್ತು. ಒಮನ್ ಮತ್ತು ಇರಾನ್‌ನ ಹೊರ್ಮುಝ್ ಜಲಸಂಧಿಯ ಸಮೀಪದಲ್ಲೇ ಈ ಘಟನೆ ನಡೆದಿತ್ತು.
ಬದಲಿ ಮಾರ್ಗ ಸಾಧ್ಯತೆ?
– ದಕ್ಷಿಣ ಆಫ್ರಿಕಾದ ಕೇಪ್ ಆಫ್ ಗುಡ್ ಹೋಪ್ ಬಳಸಿ ಮಾರ್ಗ
– ಇದರಿಂದ 6 ಸಾವಿರ ನಾಟಿಕಲ್ ಮೈಲ್ ಹೆಚ್ಚುವರಿ ದೂರ. ಜತೆಗೆ ಹೆಚ್ಚುವರಿ 14 ದಿನ
ಪರಿಣಾಮ ಏನು?
– ಪರಿಸ್ಥಿತಿ ಕೈಮೀರಿದರೆ ಭಾರತಕ್ಕೆ ಈ ಮಾರ್ಗವಾಗಿಯೇ ಸರಕುಗಳ ಆಗಮನದ ಅನಿವಾರ್ಯ
– ಸಂಚಾರ ದೀರ್ಘವಾದಷ್ಟು ಸರಕು ಸಾಗಣೆಗೆ ಕಂಟೈನರ್ ಅಲಭ್ಯತೆ
– ಕಂಪನಿಗಳಿಗೆ ಹೆಚ್ಚು ವೆಚ್ಚದಾಯಕ. ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಆತಂಕ