
ಭೂಕಂಪಕ್ಕೆ ಜಪಾನ್ ನಲ್ಲಿ ಕನಿಷ್ಠ 8 ಸಾವು, ಒಂದೇ ದಿನ 155 ಬಾರಿ ಕಂಪನ
ಟೋಕಿಯೋ: ಹೊಸ ವರ್ಷದ ಮೊದಲ ದಿನವೇ ಜಪಾನ್ ಗೆ ಪ್ರಕೃತಿ ಆಘಾತ ನೀಡಿದ್ದು, ಈಶಾನ್ಯ ಜಪಾನ್ ನಲ್ಲಿ ಪ್ರಬಲ ಭೂ ಕಂಪನ ಸಂಭವಿಸಿದ ಪರಿಣಾಮ ಕನಿಷ್ಟ 8 ಮಂದಿ ಸಾವನ್ನಪ್ಪಿದ್ದಾರೆ.
ವರ್ಷದ ಮೊದಲ ದಿನವಾದ ನಿನ್ನೆ ಜಪಾನ್ ನಲ್ಲಿ ಪ್ರಬಲ ಭೂಕಂಪನ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 7.4ರಿಂದ 7.6 ರವರೆಗೂ ಭೂಕಂಪನ ಸಂಭವಿಸಿದ್ದು, ಜಪಾನ್ ನ ಈಶಾನ್ಯ ಭಾಗದ ನನಾವೋ ನಲ್ಲಿ ಭೂ ಕಂಪನದ ಕೇಂದ್ರ ಬಿಂದು ವರದಿಯಾಗಿದೆ. ಈ ಕಂಪನದಲ್ಲಿ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದು, 32 ಸಾವಿರಕ್ಕೂ ಅಧಿಕ ಮಂದಿ ಕಂಪನದಿಂದ ಸಂತ್ರಸ್ಥರಾಗಿದ್ದಾರೆ.
ಭೂಕಂಪನದಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯವಾಗಿದ್ದು, ವರ್ಷದ ಮೊದಲ ದಿನವೇ ಸೆಂಟ್ರಲ್ ಜಪಾನ್ ನ ನಾಗರೀಕರು ಇಡೀ ರಾತ್ರಿ ಕತ್ತಲೆಯಲ್ಲಿ ಮುಳುಗುವಂತಾಗಿದೆ. ಜಪಾನ್ ಮಿಲಿಟರಿ ಬೇಸ್ ನಲ್ಲಿ ಕನಿಷ್ಠ ಸಾವಿರಕ್ಕೂ ಅಧಿಕ ಮಂದಿ ಆಶ್ರಯ ಪಡೆದಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
155 ಬಾರಿ ಕಂಪನ
ಜಪಾನ್ ನ ಇಶಿಕಾವಾ, ನಿಗಾಟಾ ಮತ್ತು ಟೊಯಾಮಾ ಪ್ರಾಂತ್ಯಗಳ ಕರಾವಳಿ ಪ್ರದೇಶಗಳಲ್ಲಿ ಕಂಪನ ಸಂಭವಿಸಿದ್ದು, 155 ಬಾರಿ ಭೂಮಿ ಕಂಪಿಸಿದೆ. ಮೊದಲ ಆರು ಕಂಪನಗಳು ಪ್ರಬಲವಾಗಿದ್ದು, ಈ ಕಂಪನಗಳು ರಿಕ್ಟರ್ ಮಾಪಕದಲ್ಲಿ 6.2 ರಿಂದ 6.7ರವರೆಗೂ ದಾಖಲಾಗಿವೆ. ಬಳಿಕ ಕನಿಷ್ಠ 3 ರಂತೆ 140ಕ್ಕೂ ಅಧಿಕ ಕಂಪನಗಳು ಸಂಭವಿಸಿವೆ ಎಂದು ಭೂಕಂಪನ ಮಾಪನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.




