ರಷ್ಯಾ ಅಧ್ಯಕ್ಷೀಯ ಚುನಾವಣೆ: ಪುಟಿನ್ ಗೆ ಮತ್ತೆ ಗೆಲುವು

ಮಾಸ್ಕೊ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ಪುಟಿನ್ ಅವರು ಶೇ. 87.17 ರಷ್ಟು ಮತಗಳನ್ನು ಪಡೆದಿದ್ದಾರೆ ಎಂದು ಒಕ್ಕೂಟದ ಕೇಂದ್ರ ಚುನಾವಣಾ ಆಯೋಗದ ದತ್ತಾಂಶ ಉಲ್ಲೇಖಿಸಿ ಟಾಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಕಮ್ಯೂನಿಸ್ಟ್ ಪಾರ್ಟಿ ಆಫ್ ರಷ್ಯನ್ ಫೆಡರೇಶನ್ ಅಭ್ಯರ್ಥಿ ನಿಕೊಲಾಯ್ ಖರಿಟೋನೊವ್ ಶೇ. 4.1 ರಷ್ಟು ಮತಗಳೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ. ನ್ಯೂ ಫೀಪಲ್ ಪಾರ್ಟಿ ಅಭ್ಯರ್ಥಿ ವ್ಲಾಡಿಸ್ಲಾವ್ ದಾವಂಕೋವ್ ಶೇ. 4.8 ರಷ್ಟು ಮತಗಳೊಂದಿಗೆ ಮೊರನೇ ಸ್ಥಾನದಲ್ಲಿದ್ದಾರೆ. ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ರಷ್ಯಾ ಅಭ್ಯರ್ಥಿ ಲಿಯೊನಿಡ್ ಸ್ಲಟ್ಸ್ಕಿ ಶೇ. 3.15 ರಷ್ಟು ಮತಗಳನ್ನು ಪಡೆದಿದ್ದಾರೆ.

ಭಾನುವಾರ ಸಂಜೆ ಮತದಾನ ಮುಕ್ತಾಯವಾಗಿದ್ದು, ಮಾರ್ಚ್ 15-17 ರಿಂದ ಮೂರು ದಿನ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾನದ ಪ್ರಮಾಣವು ಶೇಕಡಾ 74.22 ರಷ್ಟಿದೆ. 2018ರಲ್ಲಿ ನಡೆದ ಚುನಾವಣೆಯಲ್ಲಿ ಶೇ.67.54ರಷ್ಟು ಮತದಾನವಾಗಿತ್ತು. 2018 ರ ಚುನಾವಣೆಗಳಿಗೆ ಹೋಲಿಸಿದರೆ ಪುಟಿನ್ ಹೆಚ್ಚಿನ ಮತಗಳನ್ನು ಪಡೆದಿದ್ದಾರೆ.

ಗೆಲುವು ಸಾಧಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪುಟಿನ್, ರಷ್ಯಾ ಮತ್ತು ಯುಎಸ್ ನೇತೃತ್ವದ ನ್ಯಾಟೋ ಒಕ್ಕೂಟದ ನಡುವಿನ ಯಾವುದೇ ನೇರ ಸಂಘರ್ಷವು ಪೂರ್ಣ ಪ್ರಮಾಣದ ಮೂರನೇ ವಿಶ್ವ ಯುದ್ಧದಿಂದ ಒಂದು ಹೆಜ್ಜೆ ದೂರ ಎಂಬ ಅರ್ಥ ಎಂದು ಪಾಶ್ಚಿಮಾತ್ಯ ಶಕ್ತಿಗಳಿಗೆ ಎಚ್ಚರಿಕೆ ನೀಡಿದರು. ಆದರೆ, ಈ ಬಗ್ಗೆ ಯಾರೊಬ್ಬರೂ ಆಸಕ್ತಿ ತೋರುವುದು ಅಸಂಭವ ಎಂದೂ ಅವರು ಹೇಳಿದ್ದಾರೆ. ಪುಟಿನ್ ರಷ್ಯಾದ ಅಧ್ಯಕ್ಷರಾಗಿ ನಾಲ್ಕು ಬಾರಿ ಸೇವೆ ಸಲ್ಲಿಸಿದ್ದಾರೆ. ಮೊದಲ ಬಾರಿಗೆ 2000 ರಲ್ಲಿ ಮತ್ತು 2004, 2012 ಮತ್ತು 2018 ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

Latest Indian news

Popular Stories