ಬ್ರಿಜೇಶ್ ಕಾಳಪ್ಪ ನೇತೃತ್ವ : ಕೊಡಗಿನಲ್ಲಿ ೩೦ ಬೆಡ್‌ಗಳ ಆಕ್ಸಿಜನ್ ಬಸ್ ಸೇವೆ ಆರಂಭ

ಮಡಿಕೇರಿ ಜೂ.೪ : ಕೋವಿಡ್ ಪಾಸಿಟಿವಿಟಿ ದರ ಶೇ.೧೮ ಮೀರಿರುವ ಕೊಡಗು ಜಿಲ್ಲೆಯಲ್ಲಿ ಸೋಂಕಿತರ ಸಾವಿನ ಸಂಖ್ಯೆ ಕೂಡ ನಿಯಂತ್ರಣಕ್ಕೆ ಬರುತ್ತಿಲ್ಲ. ರಾಜ್ಯದ ಇತರ ಜಿಲ್ಲೆಗಳಲ್ಲಿ ಉಂಟಾದ ಆಕ್ಸಿಜನ್ ಕೊರತೆಯ ಸಮಸ್ಯೆ ಕೊಡಗನ್ನು ಕಾಡಬಾರದು ಎನ್ನುವ ಉದ್ದೇಶದಿಂದ ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಅವರು ಮಾಜಿ ಸಚಿವರು ಹಾಗೂ ಶಾಸಕರೊಬ್ಬರ ಸಹಕಾರದೊಂದಿಗೆ ಆಕ್ಸಿಜನ್ ಬಸ್ ಸೇವೆ ಆರಂಭಿಸಿದ್ದಾರೆ.
ಬಸ್ ನಲ್ಲಿ ಆಕ್ಸಿಜನ್ ಸಹಿತ ೩೦ ಬೆಡ್ ಗಳಿದ್ದು, ಸೋಂಕಿತರ ಸೇವೆಗೆ ಸಿದ್ಧವಾಗಿದೆ. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಈ ಬಸ್ ನೆರವಿಗೆ ಬರಲಿದೆ. ರಾಜ್ಯದಲ್ಲಿ ಬೆಂಗಳೂರು ಹೊರತು ಪಡಿಸಿದರೆ ಕೊಡಗು ಆಕ್ಸಿಜನ್ ಬಸ್ ಸೌಲಭ್ಯ ಪಡೆದ ಮೊದಲ ಜಿಲ್ಲೆಯಾಗಿದೆ ಎಂದು ಬ್ರಿಜೇಶ್ ಕಾಳಪ್ಪ ತಿಳಿಸಿದ್ದಾರೆ.
ಈ ಸ್ಲೀಪರ್ ಕೋಚ್ ಬಸ್‌ನಲ್ಲಿ ಮೇಲೆ ೧೫ ಮತ್ತು ಕೆಳಗೆ ೧೫ ಬೆಡ್‌ಗಳಿರುತ್ತವೆ. ಎಂಟು ಆಕ್ಸಿಜನ್ ಸಿಲಿಂಡರ್‌ಗಳು ಸಿದ್ಧವಾಗಿರಲಿದ್ದು, ಅನಿವಾರ್ಯ ಪರಿಸ್ಥಿತಿ ಎದುರಾದರೆ ೧೬ ಬೆಡ್‌ಗಳಿಗೆ ಇದನ್ನು ಬಳಸಬಹುದಾಗಿದೆ. ಆಕ್ಸಿಜನ್ ಖಾಲಿಯಾದರೆೆ ಮೈಸೂರಿನಿಂದ ಭರ್ತಿ ಮಾಡಿ ತರಲಾಗುವುದು. ಒಬ್ಬ ಖಾಸಗಿ ಶ್ರುಶೂಷಕಿ ಹಾಗೂ ಬಸ್ ಚಾಲಕ ಕಾರ್ಯನಿರ್ವಹಿಸಲಿದ್ದಾರೆ. ಇವರಿಬ್ಬರಿಗೆ ವೇತನ, ಡೀಸೆಲ್, ಆಕ್ಸಿಜನ್ ಸೇರಿದಂತೆ ಎಲ್ಲಾ ಖರ್ಚು ವೆಚ್ಚಗಳನ್ನು ನಾವೇ ಭರಿಸುತ್ತಿದ್ದೇವೆ. ಸರ್ಕಾರಿ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಆಕ್ಸಿಜನ್ ಬೆಡ್ ಸಹಿತ ಕೋವಿಡ್ ಗೆ ಸಂಬAಧಿಸಿದ ಎಲ್ಲಾ ವ್ಯವಸ್ಥೆಗಳಿರುವ ಸುಸಜ್ಜಿತ ಬಸ್ ಸೇವೆಯನ್ನು ಆರಂಭಿಸಲು ಮಾಜಿ ಸಚಿವ ಎಂ.ಕೃಷ್ಣಪ್ಪ ಹಾಗೂ ಶಾಸಕ ಪ್ರಿಯಾ ಕೃಷ್ಣ ಸಹಕಾರ ನೀಡಿದ್ದಾರೆ ಎಂದು ಬ್ರಿಜೇಶ್ ಕಾಳಪ್ಪ ಇದೇ ಸಂದರ್ಭ ಕೃತಜ್ಞತೆ ಸಲ್ಲಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕೊಡಗಿನಲ್ಲಿ ಕಾರ್ಯಾಚರಿಸುವ ಆಕ್ಸಿಜನ್ ಬಸ್ ಸೇವೆಗೆ ಚಾಲನೆ ನೀಡಿದರು.
ಆಕ್ಸಿಜನ್ ಸಹಿತ ಬಸ್ ಮಡಿಕೇರಿಗೆ ತಲುಪಿದ ನಂತರ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಗುವುದು. ಇದನ್ನು ಜಿಲ್ಲಾಡಳಿತ ತನ್ನ ವಿವೇಚನೆಗೆ ತಕ್ಕಂತೆ ಬಳಸಿಕೊಳ್ಳಬಹುದಾಗಿದೆ. ಆದರೆ ಎಲ್ಲಾ ಖರ್ಚು ವೆಚ್ಚಗಳನ್ನು ನಾವೇ ಭರಿಸುತ್ತೇವೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ, ಪೂರಕ ಸ್ಪಂದನೆಯೂ ದೊರೆತ್ತಿದೆ ಎಂದು ಬ್ರಿಜೇಶ್ ಕಾಳಪ್ಪ ಸ್ಪಷ್ಟಪಡಿಸಿದರು. ಫೋಟೋ :: ಬ್ರಿಜೇಶ್

Latest Indian news

Popular Stories