ಪೊನ್ನಂಪೇಟೆ, ಸೆ.22: ವಿಶ್ವ ಶಿಟೋರಿಯೋ ಕರಾಟೆ ಮಂಡಳಿಯ ನೂತನ ಸ್ಟ್ಯಾಂಡಿಂಗ್ ನಿರ್ದೇಶಕರಾಗಿ ಅಖಿಲ ಭಾರತ ಶಿಟೋರಿಯೋ ಕರಾಟೆ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಭಾರತದ ಹಿರಿಯ ಕರಾಟೆಪಟು ಕೊಡಗಿನ ಚೆಪ್ಪುಡಿರ ಎಸ್. ಅರುಣ್ ಮಾಚಯ್ಯ ಆಯ್ಕೆಯಾಗಿದ್ದಾರೆ.
ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 10ನೇ ಅಂತರಾಷ್ಟ್ರೀಯ ಶಿಟೋರಿಯೋ ಕರಾಟೆ ಚಾಂಪಿಯನ್ಶಿಪ್ ನ ಅಂಗವಾಗಿ ಆಯೋಜಿಸಲಾಗಿದ್ದ ವಿಶ್ವ ಶಿಟೋರಿಯೋ ಕರಾಟೆ ಮಂಡಳಿಯ ಚುನಾವಣಾ ಪ್ರಕ್ರಿಯೆ ಸಭೆಯಲ್ಲಿ ಭಾರತದಿಂದ ತೆರಳಿರುವ ಅರುಣ್ ಮಾಚಯ್ಯ ಅವರನ್ನು ಏಷ್ಯಾ ಮತ್ತು ಪೆಸಿಫಿಕ್ ಖಂಡದ ನಿರ್ದೇಶಕರಾಗಿ ಅವಿರೋಧವಾಗಿ ನೇಮಕಗೊಳಿಸಲಾಗಿದೆ ಎಂದು ವಿಶ್ವ ಶಿಟೋರಿಯೋ ಕರಾಟೆ ಮಂಡಳಿಯ ಅಧ್ಯಕ್ಷರಾಗಿರುವ ಕೆನ್ ಜೋ ಈವಾಟ ಪ್ರಕಟಿಸಿದ್ದಾರೆ.
ಅರುಣ್ ಮಾಚಯ್ಯ ಅವರು ಮುಂದಿನ ಮೂರು ವರ್ಷಗಳ ಕಾಲ ವಿಶ್ವ ಶಿಟೋರಿಯೋ ಕರಾಟೆ ಮಂಡಳಿಯ ಸ್ಟ್ಯಾಂಡಿಂಗ್ ನಿರ್ದೇಶಕರಾಗಿ ವಿಶ್ವಮಟ್ಟದಲ್ಲಿ ಏಷ್ಯಾ ಮತ್ತು ಪೆಸಿಫಿಕ್ ಖಂಡವನ್ನು ಪ್ರತಿನಿಧಿಸಲಿದ್ದಾರೆ. ಈ ಹಿಂದೆಯೂ ಇವರು 1996ರಿಂದ 2002ರವರೆಗೆ ಜಾಗತಿಕ ಮಟ್ಟದಲ್ಲಿ ಇದೇ ಹುದ್ದೆಯನ್ನು ಅಲಂಕರಿಸಿದ್ದರು. ಇದೀಗ 2ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಅಲ್ಲದೆ ವಿಶ್ವ ಕರಾಟೆ ಮಂಡಳಿಯಲ್ಲಿ 2ನೇ ಬಾರಿಗೆ ನಿರ್ದೇಶಕರಾಗಿರುವ ಭಾರತದ ಮೊದಲ ಕರಾಟೆಪಟು ಎಂಬ ಹೆಗ್ಗಳಿಕೆಗೂ ಅರುಣ್ ಮಾಚಯ್ಯ ಪಾತ್ರರಾಗಿದ್ದಾರೆ.
ಕಳೆದ ಐದು ದಶಕಗಳಿಂದ ಕರಾಟೆ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ಅದರ ಉನ್ನತಿಗೆ ಕಾರಣರಾಗಿರುವ ಅರುಣ್ ಮಾಚಯ್ಯ ಅವರು, ಪ್ರಸ್ತುತ ಅಖಿಲ ಭಾರತ ಶಿಟಾರಿಯೋ ಕರಾಟೆ ಸಂಸ್ಥೆಯ ಮತ್ತು ದಕ್ಷಿಣ ಭಾರತ ಕರಾಟೆ ಫೆಡರೇಷನ್ ಅಧ್ಯಕ್ಷರಾಗಿ, ಕರಾಟೆ ಇಂಡಿಯಾ ಆರ್ಗನೈಜೇಷನ್ ಹಿರಿಯ ಉಪಾಧ್ಯಕ್ಷರಾಗಿ, ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಂತರಾಷ್ಟ್ರೀಯ ಕರಾಟೆ ತೀರ್ಪುಗಾರರಾಗಿರುವ ಸಿ.ಎಸ್. ಅರುಣ್ ಮಾಚಯ್ಯ ಅವರು ಕರಾಟೆಯಲ್ಲಿ 8ನೇ ಡ್ಯಾನ್ ಬ್ಲಾಕ್ ಬೆಲ್ಟ್ ಪದವೀಧರಾಗಿದ್ದಾರೆ. 2022ರಲ್ಲಿ ಲಂಡನಿನ ಬರ್ಮಿಂಗ್ಹ್ಯಾಮ್ ನಲ್ಲಿ ನಡೆದ ಕಾಮನ್ವೆಲ್ತ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಾರತ ತಂಡದ ಪ್ರತಿನಿಧಿಯಾಗಿ ಭಾಗವಹಿಸಿದ್ದ ಅರುಣ್ ಮಾಚಯ್ಯ, ಈ ಹಿಂದೆ ವಿಶ್ವದ ಹಲವೆಡೆ ನಡೆದ ಹಲವಾರು ಅಂತರರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.