ಸಂಸತ್ ದಾಳಿಗೆ ನೇರ ಹೊಣೆಗಾರರಾಗಿರುವ ಪ್ರತಾಪ್ ಸಿಂಹ ರಾಜೀನಾಮೆ ನೀಡಲಿ |ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಒತ್ತಾಯ

ಗೋಣಿಕೊಪ್ಪಲು, ಡಿ.16: ದೇಶದ ಸಂಸತ್ತಿನೊಳಗೆ ಕಿಡಿಗೇಡಿಗಳು ನಡೆಸಿದ ಹೊಗೆ ಬಾಂಬ್ ದಾಳಿ ಇಡೀ ದೇಶವನ್ನೇ ಆತಂಕಕ್ಕೀಡುಮಾಡಿದ್ದು, ಈ ಭದ್ರತಾ ಲೋಪ ಹೆಚ್ಚು ಆಘಾತಕಾರಿ ಘಟನೆಯಾಗಿದೆ ಎಂದು ಹೇಳಿರುವ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಪಿ.ಎ. ಹನೀಫ್, ದಾಳಿ ನಡೆಸಿದ ಯುವಕರಿಗೆ ಮೈಸೂರು-ಕೊಡಗು ಕ್ಷೇತ್ರದ ಸಂಸದರಾದ ಪ್ರತಾಪ್ ಸಿಂಹ ಪಾಸ್ ನೀಡಿರುವುದು ಅತ್ಯಂತ ಕಳವಳಕಾರಿ ವಿಚಾರವಾಗಿದೆ. ಅದರಿಂದ ಈ ಘಟನೆಯ ನೈತಿಕ ಹೊಣೆ ಹೊತ್ತು ಪ್ರತಾಪ್ ಸಿಂಹ ಅವರು ಇನ್ನಾದರೂ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಬ್ಬ ಸಂಸದರಾಗಿ ಅಪರಿಚಿತರಿಗೆ ಪಾಸುಗಳನ್ನು ನೀಡಲು ಹೇಗೆ ಸಾಧ್ಯ? ಜವಾಬ್ದಾರಿಯುತ ವ್ಯಕ್ತಿಗಳು ಬೇಜವಾಬ್ದಾರಿಯಿಂದ ನಡೆಸುವ ಅನಾಹುತ ಮತ್ತು ಅದಕ್ಕೆ ಕಾರಣವಾಗುವುದು ಕೂಡಾ ಕಾನೂನಿನಲ್ಲಿ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಘಟನೆ ನಡೆದ ದಿನದಂದೇ ಪ್ರತಾಪ್ ಸಿಂಹರನ್ನು ಸಂಸತ್ ಸದಸ್ಯ ಸ್ಥಾನದಿಂದ ಉಚ್ಚಾಟನೆ ಮಾಡಬೇಕಿತ್ತು ಎಂದು ಹೇಳಿರುವ ಹನೀಫ್, ಸಂಸತ್ತಿಗೆ 22 ವರ್ಷಗಳ ಹಿಂದಿನ ಭಯೋತ್ಪಾದಕರ ದಾಳಿ ದಿನವನ್ನೇ ಆರಿಸಿಕೊಂಡು ಈ ಕೃತ್ಯ ನಡೆದಿರುವುದನ್ನು ಗಮನಿಸಿದರೆ, ಇದರ ಹಿಂದೆ ಬೇರೆ ಬಹುದೊಡ್ಡ ಹುನ್ನಾರವಿರುವ ಶಂಕೆ ಇದೆ. ಇದು ದೇಶದ ಸುರಕ್ಷತೆಯ ದೃಷ್ಟಿಯಿಂದ ಹಲವು ಪ್ರಶ್ನೆಗಳನ್ನು ಸೃಷ್ಟಿಸಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಮೈಸೂರು ಮೂಲದ ಮನೋರಂಜನ್ ಅವರಿಗೆ ಈ ಮೊದಲು ಪ್ರತಾಪ್ ಸಿಂಹ ಅವರೇ ಎರಡು ಬಾರಿ ಪಾಸ್ ನೀಡಿದ್ದರು ಎನ್ನಲಾಗುತ್ತಿದೆ. ಸಂಸತ್ ಸಭಾಂಗಣ ಪ್ರವೇಶಿಸಲು ಪಾಸ್ ಸ್ವೀಕರಿಸಿದ ವ್ಯಕ್ತಿ ನಡೆಸುವ ಎಲ್ಲ ಕೃತ್ಯಗಳಿಗೆ ಪಾಸ್ ಕೊಟ್ಟ ಸಂಸದರೇ ಜವಾಬ್ದಾರರಾಗಿರುತ್ತಾರೆ. ಪರಿಚಿತರಿಗಷ್ಟೇ ಪಾಸ್ ನೀಡಬೇಕು ಎಂಬ ನಿಯಮವಿದೆ. ಎಲ್ಲ ನಿಯಮಗಳನ್ನು ಪ್ರತಾಪ್ ಸಿಂಹ ಉಲ್ಲಂಘಿಸಿದ್ದಾರೆ. ಹಾಗಾಗಿ ಪ್ರತಾಪ್ ಸಿಂಹ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ಕೂಡಲೇ ಅಮಾನತುಪಡಿಸಿ ಈ ಕುರಿತು ಅವರನ್ನು ಸಮಗ್ರ ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿರುವ ಹನೀಫ್, ಸಂಸತ್ತಿಗೆ ರಕ್ಷಣೆ ನೀಡಲಾಗದವರು, ಬಿಜೆಪಿಯ ನಡೆಯನ್ನು ಪ್ರಶ್ನಿಸಿದ ಸಂಸದರನ್ನು ಅಮಾನತುಗೊಳಿಸಿ ಪ್ರಜಾಪ್ರಭುತ್ವ ವಿರೋಧಿ ಧೋರಣೆ ಮೂಲಕ ಪೌರುಷ ಮೆರೆಯುತ್ತಿದ್ದಾರೆ. ಕರ್ತವ್ಯ ಲೋಪದ ನೆಪದಲ್ಲಿ ಭದ್ರತಾ ಸಿಬ್ಬಂದಿಯನ್ನು ಅಮಾನತು ಮಾಡುತ್ತಿದ್ದಾರೆ. ಆದರೆ ಈ ಭದ್ರತಾ ವೈಫಲ್ಯಕ್ಕೆ ಮೂಲ ಕಾರಣರಾಗಿರುವ ಸಂಸದ ಪ್ರತಾಪ್ ಸಿಂಹ ವಿರುದ್ಧ ಇದುವರೆಗೂ ಏಕೆ ಕ್ರಮ ಜರುಗಿಸಿಲ್ಲ. ಪಾಸ್ ನೀಡಿದ್ದರಿಂದಲೇ ಈ ಎಲ್ಲ ಅನಾಹುತಗಳಿಗೆ ಅವರೇ ಕಾರಣವಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಸಂಸತ್ ಭವನ ಪ್ರವೇಶಿಸಲು ಪಾಸ್ ಹೊಂದಿರುವ ವ್ಯಕ್ತಿ ಬಿಗಿ ಭದ್ರತಾ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ನೀರಿನ ಬಾಟಲಿ, ಮೊಬೈಲ್ ಫೋನ್, ಇಲೆಕ್ಟ್ರಾನಿಕ್ ಪರಿಕರ ಹಾಗೂ ಆಯುಧಗಳಂಥ ಯಾವುದೇ ವಸ್ತುಗಳನ್ನು ಒಳಗೆ ಕೊಂಡೊಯ್ಯುವಂತಿಲ್ಲ. ಪಾರ್ಲಿಮೆಂಟರಿ ಸೆಕ್ಯೂರಿಟಿ ಸರ್ವಿಸ್, ದಿಲ್ಲಿ ಪೊಲೀಸ್, ವಿವಿಧ ಏಜೆನ್ಸಿಗಳು, ಮ್ಯಾನುಯಲ್ ತಪಾಸಣೆ, ಬಾಡಿ ಸ್ಕ್ಯಾನರ್, ಮೆಟಲ್ ಡಿಟೆಕ್ಟರ್ ಹೀಗೆ ಹಲವು ಹಂತದ ಭದ್ರತಾ ವ್ಯವಸ್ಥೆಯಿರುವ ಸಂಸತ್ ಗೆ ಗ್ಯಾಸ್ ಕ್ಯಾನ್ ಒಯ್ದಿದ್ದಾರೆ ಎಂದರೆ ಭದ್ರತಾ ವೈಫಲ್ಯವಲ್ಲದೆ ಬೇರೇನೂ ಕಾರಣವಲ್ಲ. ಆರೋಪಿಗಳಾಗಿ ಗುರುತಿಸಿಕೊಂಡಿರುವ ಮೈಸೂರು ಮೂಲದ ಮನೋರಂಜನ್, ಉತ್ತರ ಪ್ರದೇಶದ ಲಖನೌದ ಸಾಗರ್ ಶರ್ಮಾ, ಹರ್ಯಾಣದ ನೀಲಂ ಹಾಗೂ ಐಕ್ಕಿ ಶರ್ಮಾ, ಗುರುಗ್ರಾಮದ ಲಲಿತ್ ಝಾ ಮಹಾರಾಷ್ಟ್ರದ ಅಮೋಲ್ ಶಿಂಧೆ ಎಲ್ಲರೂ ಒಗ್ಗೂಡಿದ್ದು ಹೇಗೆ? ಒಂದೂವರೆ ವರ್ಷದಿಂದ ಸಂಚು ಹೂಡಿದ್ದರೂ ಕೇಂದ್ರ ಗುಪ್ತಚರ ಇಲಾಖೆಗೆ ಗೊತ್ತಾಗಲಿಲ್ಲವೇ? ಎಂದು ಕೇಳಿರುವ ಹನೀಫ್ ಅವರು, ಈ ಕೃತ್ಯದ ಹಿಂದೆ ದೇಶದ್ರೋಹದ ದೊಡ್ಡ ಷಡ್ಯಂತರವಿದೆ. ಆದ್ದರಿಂದ ಕೃತ್ಯದ ಹಿಂದಿರುವ ಸತ್ಯಾಂಶವನ್ನು ಬಯಲಿಗೆಳೆಯಲು ಉನ್ನತ ಮಟ್ಟದ ತನಿಖೆಯಾಗಬೇಕು. ಅದಕ್ಕೂ ಮೊದಲು ಪ್ರತಾಪ್ ಸಿಂಹ ಅವರನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಪಿ. ಎ. ಹನೀಫ್ ಆಗ್ರಹಿಸಿದ್ದಾರೆ.

ಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಕಾರ್ಯದರ್ಶಿ ಜೋಕಿಂ ರಾಡ್ರಿಗಸ್, ಅಲ್ಪಸಂಖ್ಯಾತ ಘಟಕದ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೋಳುಮಂಡ ರಫೀಕ್ ಮತ್ತು ವಿರಾಜಪೇಟೆ ನಗರ ಅಧ್ಯಕ್ಷರಾದ ಆಶೀಫ್ ಉಪಸ್ಥಿತರಿದ್ದರು.

ಚಿತ್ರ ಶೀರ್ಷಿಕೆ:
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದವರು

Latest Indian news

Popular Stories