ಪೊನ್ನಂಪೇಟೆ, ಸೆ. 05: ಲೋಕ ಪ್ರವಾದಿ ಮೊಹಮ್ಮದ್ ಪೈಗಂಬರ್ ರವರ ಜನ್ಮ ದಿನಾಚರಣೆಯಾದ ಈದ್ ಮಿಲಾದ್ ಪ್ರಯುಕ್ತ ನಲವತ್ತೋಕ್ಲು ಗ್ರಾಮದ ಯುವಕರ ತಂಡ ಗ್ರಾಮದ ಮುಖ್ಯ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.
ಕಾರ್ಯಕ್ರಮವನ್ನು ನಲುವತ್ತೋಕ್ಲಿನ ಮೊಹಿದ್ದೀನ್ ಜುಮಾ ಮಸೀದಿಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಪಿ.ಎ. ಹನೀಫ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸ್ವಚ್ಛತೆಗೆ ಇಂದು ಮೊದಲ ಆದ್ಯತೆ ನೀಡಬೇಕಾದ ಪರಿಸ್ಥಿತಿ ಬಂದೋದಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ಸ್ವಚ್ಛತೆಯ ಕುರಿತು ಸ್ವಯಂ ಪ್ರೇರಣೆಯ ಅರಿವು ಮೂಡಬೇಕು. ಹೀಗಾದಲ್ಲಿ ಮಾತ್ರ ಸ್ವಚ್ಛತೆಯ ಪರಿಕಲ್ಪನೆಗೆ ಅರ್ಥ ಬರುತ್ತದೆ ಎಂದು ಹೇಳಿದರು.
ಬಳಿಕ ಗ್ರಾಮದ ಯುವಕರ ತಂಡ ಈದ್ ಮಿಲಾದ್ ಜಾಥಾ ಸಂಚರಿಸುವ ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ಸ್ವಚ್ಛತಾ ಕಾರ್ಯವನ್ನು ನಿರ್ವಹಿಸಿತು. ಅಲ್ಲದೆ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿರುವುದರಿಂದ ಈ ಕುರಿತು ಅರಿವು ಮೂಡಿಸುವ ಬಿತ್ತಿ ಪತ್ರವನ್ನು ಸಾರ್ವಜನಿಕರಿಗೆ ಈ ಸಂದರ್ಭದಲ್ಲಿ ವಿತರಿಸಲಾಯಿತು.