ಟ್ರ್ಯಾಕ್ಟರ್‌-ಖಾಸಗಿ ಬಸ್‌‍ ನಡುವೆ ಭೀಕರ ಅಪಘಾತ, ನಾಲ್ವರ ಸಾವು

ಕೋಪ್ಪಳ,ಮೇ 18- ಟ್ರ್ಯಾಕ್ಟರ್‌ ಹಾಗೂ ಖಾಸಗಿ ಬಸ್‌‍ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಮೃತಪಟ್ಟು, ಇನ್ನಿಬ್ಬರ ಸ್ಥಿತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮುನಿರಾಬಾದ್‌ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆ ಯಲಬುರ್ಗ ತಾಲೂಕಿನ ಕರಮುಡಿ ಗ್ರಾಮದ ಬಸವರಾಜು (22), ತೇಜಸ್‌‍ (22), ದುರುಗಮ (65) ಹಾಗೂ ಗದಗ ಜಿಲ್ಲೆಯ ತಿಮಾಪುರ ಗ್ರಾಮದ ಕೊಂಡಪ್ಪ (60) ಮೃತಪಟ್ಟ ದುರ್ದೈವಿಗಳು.

ಶಿವಪ್ಪ ಎಂಬುವರು ಹರಕೆ ತೀರಿಸುವ ಸಲುವಾಗಿ 30 ಮಂದಿ ಸಂಬಂಧಿಕರನ್ನು ಕರೆದುಕೊಂಡು ಕೊಪ್ಪಳ ತಾಲೂಕಿನ ಹುಲಿಗೆಮದೇವಿ ದೇವಸ್ಥಾನಕ್ಕೆ ಟ್ರ್ಯಾಕ್ಟರ್‌ನಲ್ಲಿ ನಿನ್ನೆ ಬಂದು ಹರಕೆ ತೀರಿಸಿ ರಾತ್ರಿ ವಾಪಸ್ಸಾಗುತ್ತಿದ್ದರು.

ಈ ಸಂದರ್ಭದಲ್ಲಿ ಹೊಸಲಿಂಗಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿ ಹಿಂದಿನಿಂದ ಅತೀ ವೇಗವಾಗಿ ಬರುತ್ತಿದ್ದ ಖಾಸಗಿ ಬಸ್ಸು ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಸುದ್ದಿ ತಿಳಿದು ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ಯಶೋಧ ವಂಟಗೋಡಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಮುನಿರಾಬಾದ್‌ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತವೆಸಗಿದ ಬಸ್‌‍ ಚಾಲಕ ಪರಾರಿಯಾಗಿದ್ದು, ಆತನ ಶೋಧ ಕಾರ್ಯ ಮುಂದುವರೆದಿದೆ.

Latest Indian news

Popular Stories