ಸಕಾಲದಲ್ಲಿ ಸಿಗದ ತುರ್ತು ವಾಹನ : ಯುವಕ ಸಾವು

ಮಡಿಕೇರಿ ಮೇ ೫ : ಅನಾರೋಗ್ಯದಿಂದ ಬಳಲುತ್ತಿದ್ದ ಯುವಕನೊಬ್ಬ ಸಕಾಲದಲ್ಲಿ ತುರ್ತು ವಾಹನ ಸಿಗದೆ ನಡು ರಸ್ತೆಯಲ್ಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಸೋಮವಾರಪೇಟೆ ತಾಲೂಕಿನ ಬಜೆಗುಂಡಿ ಬಳಿ ನಡೆದಿದೆ. ಬಜೆಗುಂಡಿ ನಿವಾಸಿ ಗೌರಿ ಎಂಬವರ ಪುತ್ರ ಮನು (೨೩) ಎಂಬಾತನೇ ಮೃತಪಟ್ಟ ಯುವಕನಾಗಿದ್ದಾನೆ.
ಸೋಮವಾರಪೇಟೆಯ ಬಾರ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಮನು ಕಳೆದ ಎರಡು ದಿನಗಳಿಂದ ಜ್ವರ, ಕೆಮ್ಮು, ವಾಂತಿಯಿoದ ಬಳಲುತ್ತಿದ್ದ. ಮಂಗಳವಾರ ಸೋಮವಾರಪೇಟೆ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡು ಬಂದಿದ್ದ ಎಂದು ಹೇಳಲಾಗಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಮನುವಿಗೆ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಆಸ್ಪತ್ರೆಗೆ ಹೋಗುವಂತೆ ತಿಳಿಸಲಾಗಿತ್ತು. ಬುಧವಾರ ಬೆಳಗ್ಗೆ ಕೆಮ್ಮು ಜಾಸ್ತಿಯಾಗಿದ್ದು ಅಕ್ಕ ಪಕ್ಕ ಮನೆಯವರು ಸ್ಥಳೀಯ ಆಶಾ ಕಾರ್ಯಕರ್ತೆಗೆ ಮಾಹಿತಿ ನೀಡಿದ್ದರು ಎಂದು ಹೇಳಲಾಗಿದೆ.
ಆದರೆ, ಮಡಿಕೇರಿ ಆಸ್ಪತ್ರೆಗೆ ದಾಖಲಾಗಲು ಸೂಕ್ತ ಸಮಯದಲ್ಲಿ ತುರ್ತು ವಾಹನ ಸಿಗಲು ೩ ಗಂಟೆ ತಡವಾಗಿದ್ದು ತೀವ್ರ ಬಳಲಿಕೆಯಿಂದ ಬಜೆಗುಂಡಿ ಮಸೀದಿ ಬಳಿ ಮನು ರಸ್ತೆಯಲ್ಲೇ ಕುಸಿದು ಬಿದ್ದಿದ್ದಾನೆ. ನಂತರ ಸ್ಥಳಕ್ಕಾಗಮಿಸಿದ ಆಂಬುಲೆನ್ಸ್ ವಾಹನದಲ್ಲಿ ಮಡಿಕೇರಿಗೆ ಸಾಗಿಸುವ ಸಂದರ್ಭ ಮಾರ್ಗ ಮಧ್ಯೆ ಮನು ಮೃತಪಟ್ಟಿದ್ದಾನೆ.
ವಿಚಾರ ತಿಳಿದ ಮನುವಿನ ತಾಯಿ ಆಸ್ಪತ್ರೆ ಮುಂದೆ ರೋಧಿಸುತ್ತಿದ್ದ ದೃಶ್ಯ ಮನ ಕಲಕುವಂತಿತ್ತು. ತನ್ನ ಮಗನನ್ನು ಆಸ್ಪತ್ರೆಗೆ ದಾಖಲಿಸಲು ವಿಳಂಬ ಮಾಡಿದ್ದೇ ಸಾವಿಗೆ ಕಾರಣ ಎಂದು ರೋಧಿಸಿದರು. ಫೋಟೋ :: ಮನು

Latest Indian news

Popular Stories