ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,ಮಡಿಕೇರಿ ವತಿಯಿಂದ ಕಥೆ ಬರೆಯುವ ಸ್ಪರ್ಧೆ ಮತ್ತು ಕತೆ ರಚನಾ ವಿಧಾನದ ಕುರಿತು ಉಪನ್ಯಾಸ

ಮಡಿಕೇರಿ ಆ.25. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,ಮಡಿಕೇರಿ ವತಿಯಿಂದ ಮಡಿಕೇರಿಯ ಲ್ಲಿ ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ನಾ.ಡಿಸೋಜಾ ರವರ ಹೆಸರಿನಲ್ಲಿ ಸ್ಥಾಪಿತವಾಗಿರುವ
ನಾ. ಡಿಸೋಜ ಮಕ್ಕಳ ಸಾಹಿತ್ಯ ಪುರಸ್ಕಾರ ದತ್ತಿನಿಧಿಯಂತೆ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಕಥೆ ಬರೆಯುವ ಸ್ಪರ್ಧೆ ಮತ್ತು ಕತೆ ರಚನಾ ವಿಧಾನದ ಕುರಿತು ಉಪನ್ಯಾಸವು ಮಡಿಕೇರಿಯ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಇಂದು
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್ ಐ ಮುನೀರ್ ಅಹಮದ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.


ಉದ್ಘಾಟನೆಯನ್ನು ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜು ಉಪ ನಿರ್ದೇಶಕರಾದ ಪುಟ್ಟರಾಜು ರವರು ನೆರವೇರಿಸಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ವಿದ್ಯಾರ್ಥಿಗಳಿಗೆ
ಕಥೆ ಬರೆಯಲು ವೇದಿಕೆ ಹಾಗೂ ಪ್ರೋತ್ಸಾಹ ನೀಡುತ್ತಿದೆ.

ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡು ಮುಂದೆ ಉತ್ತಮ ಕಥೆಗಾರರು ಸಾಹಿತಿಗಳು ಆಗಬೇಕೆಂದು ಕಿವಿಮಾತು ಹೇಳಿದರು. ಕತೆ ರಚನೆ ಕುರಿತು ಉಪನ್ಯಾಸ ನೀಡಿದ ಸಾಹಿತಿ ಬರಹಗಾರ್ತಿ ಶ್ರೀಮತಿ ಸುನೀತಾ ಕುಶಾಲನಗರ ಅವರು ಮಾತನಾಡಿ ಕಥೆ ಬರೆಯಬೇಕೆಂದರೆ ಮೊದಲು ಮೂಲ ಹಾಗೂ ಅನುವಾದಿತ ಕಥೆ ಗಳನ್ನು ಓದಿಕೊಳ್ಳಬೇಕು. ಕಥೆ ಅನುಕರಣೆಯಾಗಬೇಕೆಂದಿಲ್ಲ ಮನಸ್ಸಿಗೆ ಮೂಡಿದ ವಿಷಯಗಳ ಕುರಿತು ಕಥೆ ಬರೆಯಬಹುದು. ಲೋಕ ಸಾಹಿತ್ಯದ ಕುರಿತು ತಿಳಿದುಕೊಂಡರೆ ಕಥೆ ಬರೆಯಲು ಅನುಕೂಲವಾಗುತ್ತದೆ ಎಂದು ಕಿವಿಮಾತು ಹೇಳಿದರು. ಕಥೆ ಎಂದಿಗೂ ದೊಡ್ಡದಾಗಿರದೆ ಸಣ್ಣ ಕಥೆಗಳನ್ನು ಬರೆದರೆ ಆ ಬರಹ ಹೆಚ್ಚಿನ ಜನರನ್ನು ತಲುಪುತ್ತದೆ ಎಂದು ಅವರು ತಮ್ಮ ಉಪನ್ಯಾಸದಲ್ಲಿ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಮಡಿಕೇರಿಯ
ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪಿ.ಆರ್. ವಿಜಯ, ಅವರು ಮಾತನಾಡಿ ಕಥೆ ಬರೆಯಬೇಕೆಂದರೆ ಕಥೆಯನ್ನು ಓದುವ ಹಾಗೂ ಕೇಳುವ ಮನಸ್ಸಿರಬೇಕು. ಇಂದಿನ ಕಥಾ ಸ್ಪರ್ಧೆಗೆ ಆಗಮಿಸಿರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಗಮನಿಸಿದರೆ ಖಂಡಿತ ಮುಂದೊಂದು ದಿನ ಜಿಲ್ಲೆಯಲ್ಲಿ ಉತ್ತಮ ಕಥೆಗಾರು ರೂಪುಗೊಳ್ಳಬಹುದು ಎಂದು ಆಶಿಸಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿ ಸಂಪತ್ ಕುಮಾರ್ ಅವರು ಮಾತನಾಡಿ ಕಥೆಯನ್ನು ಬರೆಯುವಾಗ ಜನಪದ ಭಾಷೆಯನ್ನು ಬಳಸಿಕೊಂಡರೆ ಜನರ ಮನಸನ್ನು ತಲುಪುತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್ ಐ ಮುನೀರ್ ಅಹಮದ್ ಅವರು ಮಾತನಾಡಿ ವಿದ್ಯಾರ್ಥಿಗಳು ಅವರ ಇಚ್ಛೆಯಂತೆ ಕಲಿತು ಬರೆಯುವ ಕಥೆಗಿಂತ ವಿಷಯ ಆಧಾರಿತ ಕಥೆಯನ್ನು ಬರೆಯಬೇಕು ಎನ್ನುವ ಉದ್ದೇಶದಿಂದ ಪರಿಷತ್ತು ವಿದ್ಯಾರ್ಥಿಗಳಿಗೆ ಆಯ್ಕೆ ವಿಷಯಗಳನ್ನು ನೀಡುತ್ತಿದೆ ವಿದ್ಯಾರ್ಥಿಗಳು ತಮ್ಮ ಅನುಭವ ಹಾಗೂ ಭಾವನೆಗಳನ್ನು ಕೇಂದ್ರೀಕರಿಸಿ ಜನರ ಮನ ಮುಟ್ಟುವಂತೆ ಕಥೆ ಬರೆಯಲು ಸಾಧ್ಯವಾಗಲಿ ಎಂದು ಶುಭ ಹಾರೈಸಿದರು.ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶ್ರೀಮತಿ ಪುದಿಯನೆರವನ ರೇವತಿ ರಮೇಶ್ ಕಾರ್ಯಕ್ರಮ ನಿರೂಪಿಸಿ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶ್ರೀಮತಿ ಕಡ್ಲೆ ರ ತುಳಸಿ ಮೋಹನ್ ಸ್ವಾಗತಿಸಿ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ರಿಷಿತ್ ಮಾದಯ್ಯ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು ಪೋಷಕರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿರ್ದೇಶಕರಾದ ಮಂಜುನಾಥ್ ಸೇರಿದಂತೆ 150 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

Latest Indian news

Popular Stories