ರಸ್ತೆ ಕಾಮಗಾರಿಯಲ್ಲಿ ಭ್ರಷ್ಟಾಚಾರ; ತನಿಖಗೆ ಆಗ್ರಹ

ರಾಯಚೂರು: ದೇವದುರ್ಗ ತಾಲ್ಲೂಕಿನ ಕೊಪ್ಪರ ಗ್ರಾಮದಿಂದ ಚಿಕ್ಕಬೂದೂರುವರೆಗಿನ ರಸ್ತೆ ಸುಧಾರಣೆ ಕಾಮಗಾರಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು, ಸೂಕ್ತ ತನಿಖೆ ನಡೆಸಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟದ ದೇವದುರ್ಗ ಘಟಕದ ಅಧ್ಯಕ್ಷ ಶಿವರಾಯ ಅಕ್ಕಿರಿಕಿ ಒತ್ತಾಯಿಸಿದರು.

ಕೊಪ್ಪರ ಗ್ರಾಮದಿಂದ ಚಿಕ್ಕಬೂದುರ ರಸ್ತೆ ಸುಧಾರಣೆಗೆ ₹ 1.50 ಕೋಟಿ ಬಿಡುಗಡೆಯಾಗಿದ್ದು ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಮುಂಗಡ ಹಣ ಪಾವತಿ ಮಾಡಿದ್ದಾರೆ. ಕಳೆದ ಮೇ 15 ರಂದು ಕಾಮಗಾರಿ ಪ್ರಾರಂಭ ಮಾಡಲು ಸೂಚಿಸಿದ್ದಾರೆ. ‘ಕನಕದಾಸರ ಕಟ್ಟೆಯಿಂದ ಬೂದುರು ಹಳ್ಳದವರೆಗೆ’ ಎಂದು ಹೆಸರು ಬದಲಾಯಿಸಿ ಗ್ರಾಮ ಪಂಚಾಯಿತಿಯ ಎನ್ ಆರ್ ಇ.ಜಿ ಅಡಿಯಲ್ಲಿ ಮೊರಂ ಹಾಕಿ ರಸ್ತೆ ಸುಧಾರಣೆ ಮಾಡಿದ್ದಾರೆ.

ಈಗಾಗಲೇ 2023-24 ಸಾಲಿನ ಕಾಮಗಾರಿ ಎಂದು ಹಣ ಪಡೆಯಲಾಗಿದೆ ಹಾಗೂ 2020-2021 ಸಾಲಿನಲ್ಲಿ ಕೊಪ್ಪರ ಚಿಕ್ಕಬೂದುರ ರಸ್ತೆ ಸುಧಾರಣೆಯನ್ನು ಗ್ರಾಮ ಪಂಚಾಯಿತಿಯಿಂದ ನಿರ್ವಹಿಸಿದ್ದು ಒಂದೇ ರಸ್ತೆಗೆ ಎರಡು ಬಿಲ್ಲು ಪಡೆದು ಸರ್ಕಾರದ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಆರೋಪಿಸಿದರು.

ಲೋಕೋಪಯೋಗಿ ಇಲಾಖೆಯ ದೇವದುರ್ಗ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಬಕ್ಕಪ ಅವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದು ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಉನ್ನತ ಮಟ್ಟದ ತನಿಖೆ ನಡೆಸಿ ಗುತ್ತಿಗೆದಾರರ ಪರವಾನಿಗೆ ರದ್ದುಪಡಿಸಿ ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಎಂ.ಆರ್.ಭೇರಿ, ಮಲ್ಲಯ್ಯ ಕಟ್ಟಿಮನಿ, ಮಲ್ಲಿಕಾರ್ಜುನ ಸಿಂಗ್ರಿ, ಹನುಮಂತ ಕೋಟೆ ಉಪಸ್ಥಿತರಿದ್ದರು

Latest Indian news

Popular Stories