ಪ್ರಥಮ ಚಿಕಿತ್ಸಾ ವಿಧಾನಗಳ ಬಗ್ಗೆ ಸೋಷಿಯಲ್ ಮೀಡಿಯಾ ಮೂಲಕ ಜಾಗೃತಿ ಮೂಡಿಸಿ : ಜಿಲ್ಲಾಧಿಕಾರಿ

ಕಾರವಾರ : ಹಲವು ಕಾರಣಗಳಿಂದ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ದೊರೆಯುವುದು ವಿಳಂಬವಾದಲ್ಲಿ ರೋಗಿಯ ಪರಿಸ್ಥಿತಿ ಗಂಭೀರವಾಗಲಿದ್ದು, ಇದನ್ನು ತಡೆಯಲು ತಕ್ಷಣದಲ್ಲಿ ಪ್ರಥಮ ಚಿಕಿತ್ಸೆ ನೀಡುವುದರಿಂದ ಹೆಚ್ಚಿನ ಅನಾಹುತ ತಡೆಯಲು ಸಾಧ್ಯವಿದೆ. ಪ್ರಥಮ ಚಿಕಿತ್ಸಾ ವಿಧಾನಗಳ ಕುರಿತಂತೆ ಚಿಕ್ಕ ವೀಡಿಯೋಗಳನ್ನು ಸಿದ್ದಪಡಿಸಿ ಸಾಮಾಜಿಕ ಮಾದ್ಯಮಗಳಲ್ಲಿ ಪ್ರಸಾರ ಮಾಡುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ನಿರ್ದೇಶನ ನೀಡಿದರು.

ಅವರು ಶನಿವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಸಮಿತಿಯ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉತ್ತರ ಕನ್ನಡ ಜಿಲ್ಲೆಯು ಭೌಗೋಳಿಕವಾಗಿ ಅತ್ಯಂತ ವಿಶಾಲವಾಗಿದ್ದು, ಹಲವು ಕುಗ್ರಾಮಗಳನ್ನು ಹೊಂದಿದೆ. ಕೆಲವು ಕಡೆಗಳಲ್ಲಿ ಗ್ರಾಮಗಳಿಗೆ ಸೂಕ್ತ ರಸ್ತೆ ಸಂಪರ್ಕ ಸಹ ಇಲ್ಲವಾಗಿದೆ. ಇಂತಹ ಸ್ಥಳದಲ್ಲಿರುವ ವ್ಯಕ್ತಿಯ ಆರೋಗ್ಯದಲ್ಲಿ ತಕ್ಷಣದಲ್ಲಿ ಏರುಪೇರುಗಳಾದಾಗ, ಅಪಘಾತಗಳಾದಾಗ, ಅಗ್ನಿ ಅವಘಡಗಳಾದಾಗ, ವಿಷ ಜಂತುಗಳು ಕಚ್ಚಿದಾಗ ತುರ್ತು ವೈದ್ಯಕೀಯ ನೆರವು ದೊರೆಯುವುದು ಸಾಧ್ಯವಾಗದೇ ಇದ್ದಾಗ ಸಂಭವಿಸಬಹುದಾದ ಪ್ರಾಣಾಪಾಯದಂತಹ ಗಂಭೀರ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಪ್ರಥಮ ಚಿಕಿತ್ಸಾ ವಿಧಾನಗಳು ನೆರವಾಗಲಿವೆ.

ಆದ್ದರಿಂದ ಇಂತಹ ಪ್ರಥಮ ಚಿಕಿತ್ಸಾ ವಿಧಾನಗಳ ಕುರಿತಂತೆ ಆರೋಗ್ಯ ಇಲಾಖೆಯ ಮೂಲಕ ವೀಡಿಯೋಗಳನ್ನು ಸಿದ್ದಪಡಿಸಿ, ಸಾರ್ವಜನಿಕರಿಗೆ ಸುಲಭವಾಗಿ ದೊರೆಯುವಂತೆ ವ್ಯಾಟ್ಸಾಸ್ ಸೇರಿದಂತೆ ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರಪಡಿಸಿದ್ದಲ್ಲಿ, ಇದರಿಂದ ಅನೇಕ ರೋಗಿಗಳನ್ನು ಪ್ರಾಣಾಪಾಯಗಳಿಂದ ಪಾರು ಮಾಡಬಹುದು ಎಂದರು.

ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ಇದುವರೆಗೆ ಹಾವು ಕಡಿತದಿಂದ 5 ಪ್ರಕರಣ ವರದಿಯಾಗಿದ್ದು, ಅದರಲ್ಲಿ 3 ಪ್ರಕರಣಗಳಲ್ಲಿ ಆಸ್ಪತ್ರೆಗೆ ಸಾಗುವ ಮಾರ್ಗ ಮಧ್ಯದಲ್ಲಿಯೇ ವ್ಯಕ್ತಿಗಳ ಮರಣ ಸಂಭವಿಸಿದೆ. ಈ ವ್ಯಕ್ತಿಗಳಿಗೆ ಸೂಕ್ತ ಪ್ರಥಮ ಚಿಕಿತ್ಸೆ ದೊರೆತಿದ್ದಲ್ಲಿ ಅವರ ಪ್ರಾಣ ಉಳಿಯುತ್ತಿತ್ತು. ಅಲ್ಲದೇ ಅಪಘಾತಗಳು ಸಂಭವಿಸಿದಾಗ, ಹೃದಯಾಘಾತಗಳಾದಾಗ ನೀಡುವ ಪ್ರಥಮ ಚಿಕಿತ್ಸೆಯು ರೋಗಿಯ ಜೀವವನ್ನು ಉಳಿಸುತ್ತವೆ. ಆದ್ದರಿಂದ ಪ್ರಥಮ ಚಿಕಿತ್ಸಾ ವಿಧಾನಗಳನ್ನು, ಸರಳವಾಗಿ, ಎಲ್ಲರಿಗೂ ಅರ್ಥವಾಗವಂತೆ ವೀಡಿಯೋ ಸಿದ್ದಪಡಿಸುವಂತೆ ತಿಳಿಸಿದರು.

ಪ್ರಥಮ ಚಿಕಿತ್ಸಾ ವಿಧಾನಗಳ ಬಗ್ಗೆ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿಯನ್ನು ನೀಡುವುದರ ಮೂಲಕ ಎಲ್ಲಾ ಮನೆಗಳಿಗೆ ಮಾಹಿತಿ ತಲುಪುವಂತೆ ಹಾಗೂ ತುರ್ತು ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಇದರ ಅರಿವು ಇರುವಂತೆ ಯೋಜನೆ ರೂಪಿಸಿ, ಅನುಷ್ಠಾನಗೊಳಿಸಿ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನೀರಜ್, ಆರೋಗ್ಯ ಇಲಾಖೆಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

Latest Indian news

Popular Stories