ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲು ಒತ್ತಾಯ

ರಾಯಚೂರು: ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲು ಒತ್ತಾಯಿಸಿ ನಮ್ಮ ಕರ್ನಾಟಕ ಜನತಾ ವೇದಿಕೆ ಜಿಲ್ಲಾ ಘಟಕದ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಈಗಾಗಲೇ ಮೇ 29ರಿಂದ ಶೈಕ್ಷಣಿಕ ವರ್ಷ ಆರಂಭವಾಗಿದ್ದು ರಾಜ್ಯದ 31 ಜಿಲ್ಲೆಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಸುಮಾರು 10 ಸಾವಿರ ಶಿಕ್ಷಕರ ಕೊರತೆ ಎದುರಾಗಿದ್ದು, ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರಿದೆ. ಶಾಲೆಯ ಆರಂಭದಲ್ಲಿಯೇ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡು ಶಾಲಾ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಬೇಕು. ಜೂನ್ ತಿಂಗಳಲ್ಲಿಯೇ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

ಮೇರಿಟ್ ಆಧಾರದ ಮೇಲೆ ಅತಿಥಿ ಶಿಕ್ಷರನ್ನು ನೇಮಕ ಮಾಡಿಕೊಳ್ಳುವುದು ಕೈಬಿಟ್ಟು ಕಳೆದ ವರ್ಷ ಸೇವೆ ಸಲ್ಲಿಸಿದ ಅತಿಥಿ ಶಿಕ್ಷಕರನ್ನು ಪುನಃ ನೇಮಕ ಮಾಡಿಕೊಂಡು ಕನಿಷ್ಠ ವೇತನ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಜಿ.ಕೆ ನಾಗರಾಜ, ಶಬಾನಾ, ಸುಜಾತ, ರೇಣುಕಾ, ಸುಮಂಗಲಾ ಇದ್ದರು.

Latest Indian news

Popular Stories