ರಾಜಕೀಯ ನಾಯಕರಿಂದ ಕಲುಷಿತ ವಾತಾವರಣ: ಹಳ್ಳಿ ನಾಗರಾಜ

ರಾಯಚೂರು: ದೇಶದಲ್ಲಿ ರಾಜಕೀಯ ನಾಯಕರು ಒಡೆದಾಳುವ ನೀತಿ ಅನುಸರಿಸಿ ಶಾಂತಿಯುತ ವಾತಾವರಣವನ್ನು ಕಲುಷಿತಗೊಳಿಸುತ್ತಿದ್ದಾರೆ. ದೇಶದ ಎಲ್ಲಾ ನಾಗರಿಕರನ್ನು ಸಮಾನತೆಯಿಂದ ಕಾಣುವ ಸಂವಿಧಾನವನ್ನು ಬದಲಿಸಿ ಮನುವಾದಿ ಸಂವಿಧಾನ ಹೇರಲು ಮುಂದಾಗುತ್ತಿದೆ ಎಂದು ಚಿಂತಕ ಹಳ್ಳಿ ನಾಗರಾಜ ಸಲಹೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಹಾಗೂ ತಾಲ್ಲೂಕು ಘಟಕ ಮತ್ತು ಕಲಬುರಗಿಯ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನದ ವತಿಯಿಂದ ಕನ್ನಡ ಭವನದಲ್ಲಿ ಕವಿ, ಪ್ರಾಧ್ಯಾಪಕ ಮಲ್ಲಯ್ಯ ಅತ್ತನೂರು ಅವರ ‘ಗವಿಚಂದಿರ, ನವಮಾಸದ ನೆನಪುಗಳು ಹಾಗೂ ಸಾಹಿತ್ಯ ಸಿಂಚನ’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ಕರ್ನಾಟಕ ರಾಜ್ಯ ಶಾಂತಿಯ ತೋಟವಾಗಿದೆ. ಅನೇಕ ಜಾತಿ ಜನಾಂಗದವರು ಪರಸ್ಪರ ಸಹಬಾಳ್ವೆ ನಡೆಸಿ ಬಹುತ್ವ ಭಾರತದ ವೈಶಿಷ್ಠತೆಯನ್ನು ಎತ್ತಿ ಹಿಡಿದಿದ್ದಾರೆ. ಆದರೆ ಕೆಲ ವರ್ಷಗಳಿಂದ ಜಾತಿ–ಜಾತಿ, ಧರ್ಮಗಳ ನಡುವೆ ದ್ವೇಷ ಹರಡಲಾಗುತ್ತಿದ್ದು, ರಾಜಕೀಯದಲ್ಲಿ ಧರ್ಮ ಬೆಸೆದು ಕಲುಷಿತಗೊಳಿಸಲಾಗುತ್ತಿದೆ. ಸಾಹಿತಿಗಳು ತಮ್ಮ ಬರವಣಿಗೆ ಮೂಲಕ ಜನರಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸಬೇಕು ಹಾಗೂ ಸಮಾಜದ ಓರೆಕೋರೆಗಳನ್ನು ತಿದ್ದುವ ಕೆಲಸ ಮಾಡಬೇಕು ಎಂದು

ಸಾಹಿತಿಗಳು ಪರಿಸ್ಥಿತಿಗಳ ಬದಲಾವಣೆಗೆ ಶ್ರಮಿಸಬೇಕು. ತಮ್ಮ ಕೃತಿಗಳು ಪರಿಣಾಮಕಾರಿಯಾಗಿ ರಚನೆಯಾಗಲು ಸತತ ಅಧ್ಯಾಯನ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಸಾಹಿತಿ ಗವಿಸಿದ್ದಪ್ಪ ಪಾಟೀಲ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಜಾತಿ, ಧರ್ಮವನ್ನು ಮೀರಿ ಮಾನವಧರ್ಮ ಶ್ರೇಷ್ಠ ಎಂದು ಸಾರಿದರು. ಮನುಷ್ಯರನ್ನು ಪರಸ್ಪರ ಪ್ರೀತಿಸಬೇಕು ಎಂದು ವಚನಗಳ ಮೂಲಕ ಸಂದೇಶ ನೀಡಿದ್ದಾರೆ. ಸಾಹಿತಿಗಳು ಸಮಾಜಮುಖಿ ಕಾರ್ಯಗಳನ್ನು ಮಾಡಿದಾಗ ಮಾತ್ರ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ ಅಧ್ಯಕ್ಷತೆ ವಹಿಸಿದ್ದರು. ಕಲಬುರಗಿಯ ಸಿದ್ದೇಶ್ವರ ಪ್ರಕಾಶನದ ಸಂಸ್ಥಾಪಕ ಬಸವರಾಜ ಕೊನೇಕ್ , ಆಂಜನೇಯ ಕಾವಲಿ, ರೇಖಾ ಬಡಿಗೇರ್, ಸಾಹಿತಿ ಶರಣಪ್ಪ ಚಲವಾದಿ, ಶಿಕ್ಷಕಿ ಯಶೋಧ ವೈ.ಕೆ, ಕೃತಿಯ ಕರ್ತೃ ಮಲ್ಲಯ್ಯ ಅತ್ತನೂರ, ಪ್ರಕಾಶಕ ಶರಣಬಸ್ಸಪ್ಪ ವಡ್ಡನಕೇರಿ ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಕೋಶಾಧ್ಯಕ್ಷ ರಾವುತ್ ರಾವ್ ಬರೂರ ಸ್ವಾಗತಿಸಿದರು. ವಿಜಯ ರಾಜೇಂದ್ರ ನಿರೂಪಿಸಿದರು.

Latest Indian news

Popular Stories