ಕೋವಿಡ್ ನಿರ್ವಹಣೆ ಕುರಿತು ಗ್ರಾಮಗಳ ಸ್ಥಿತಿ ಪರಿಶೀಲಿಸಲು ಜಿಲ್ಲಾಧಿಕಾರಿ ಸೂಚನೆ

ರಾಯಚೂರು, ಮೇ. ೨೪ (ಕ.ವಾ):- ಇಬ್ಬರು ಸಹಾಯಕ ಆಯುಕ್ತರು, ಎಲ್ಲಾ ತಹಶೀಲ್ದಾರರು ಹಾಗೂ ತಾಲೂಕು ಪಂಚಾಯತ್ ಇಒಗಳು ಮೇ.೨೫ರ ಮಂಗಳವಾರ ಬೆಳಿಗ್ಗೆನಿಂದಲೇ ಕೋವಿಡ್ ಹೆಚ್ಚಿರುವ ಜಿಲ್ಲೆಯ ಗ್ರಾಮಗಳನ್ನು ಪರಿಶೀಲಿಸಿ, ಅದರ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಅವರು ನಿರ್ದೇಶನ ನೀಡಿದರು.

ಅವರು ಮೇ.೨೪ರ ಸೋಮವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿಯ ವಿಡಿಯೋ ಸಂವಾದ ಸಭಾಂಗಣದಲ್ಲಿ ಜಿಲ್ಲೆಯ ಹಿರಿಯ ಅಧಿಕಾರಿಗಳು ಹಾಗೂ ಎಲ್ಲಾ ತಾಲೂಕುಗಳ ತಹಶೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ಆರೋಗ್ಯ, ಕಂದಾಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಗ್ರಾಮಗಳಲ್ಲಿ ಕೋವಿಡ್ ನಿರ್ವಹಣೆ ಕುರಿತಂತೆ ಹಮ್ಮಿಕೊಳ್ಳಲಾಗಿದ್ದ ವಿಡಿಯೋ ಕಾನ್ಪರೆನ್ಸ್ನಲ್ಲಿ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು. 

ಎಸಿ, ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯತ್ ಇಒಗಳು ಸೋಂಕು ಹೆಚ್ಚಿರುವ ಎರಡು ಗ್ರಾಮಗಳಿಗೆ ಪ್ರತ್ಯೇಕವಾಗಿ ಪ್ರತಿ ದಿನ ಭೇಟಿ ನೀಡಬೇಕು, ಆ ಗ್ರಾಮದ ಜನಸಂಖ್ಯೆ, ಮನೆಗಳ ಸಂಖ್ಯೆ, ಅಲ್ಲಿನ ಸೋಂಕಿತರು, ಅವರಿಗೆ ನೀಡಲಾಗುತ್ತಿರುವ ಚಿಕಿತ್ಸೆ, ಆರೋಗ್ಯ ಇಲಾಖೆಯಿಂದ ಕೈಗೊಳ್ಳಲಾಗಿರುವ ಮನೆ ಮನೆ ಸಮೀಕ್ಷಾ ಕಾರ್ಯ, ಸೋಂಕಿತರು ಐಸೋಲೇಷನ್‌ನಲ್ಲಿರುವ ಮಾಹಿತಿ ಹಾಗೂ ಅವರನ್ನು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಲಾಗಿರುವ ವಿವರ, ಮುಖ್ಯವಾಗಿ ವಲಸೆ ಬಂದವರು ಹಾಗೂ ಅವರ ಆರೋಗ್ಯದ ಸ್ಥಿತಿಗತಿಗಳ ಮಾಹಿತಿಯ್ನನು ನಿಗದಿತ ನಮೂನೆಯಲ್ಲಿ ಪ್ರತಿ ದಿನ ಸಂಜೆ ವೇಳೆಗೆ ಸಲ್ಲಿಸಬೇಕು ಎಂದು ಅವರು ತಿಳಿಸಿದರು. 

ಪ್ರತಿ ದಿನ ಈ ಎಲ್ಲಾ ಅಧಿಕಾರಿಗಳು ಜಿಲ್ಲೆಯ ೭ ತಾಲೂಕುಗಳ ಒಟ್ಟು ೩೨ ಗ್ರಾಮಗಳಿಗೆ ಭೇಟಿ ನೀಡಿದಂತಾಗುತ್ತದೆ, ಮೊದಲ ಹಂತದಲ್ಲಿ ೭ ರಿಂದ ೧೦ ದಿನಗಳಲ್ಲಿ ಈ ಪ್ರಕ್ರಿಯೆ ಕೈಗೊಳ್ಳಬೇಕು, ಪ್ರತಿ ದಿನ ೩೨ ಗ್ರಾಮಗಳಲ್ಲಿ ಕೋವಿಡ್ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು, ೧೦ ದಿನಗಳ ನಂತರ ಪುನಃ ಅದೇ ಗ್ರಾಮಗಳಿಗೆ ಸಂಬAಧಿಸಿದವರು ಭೇಟಿ ನೀಡಿ ಆ ಗ್ರಾಮದ ಸೋಂಕಿನ ಸ್ಥಿತಿ-ಗತಿಗಳನ್ನು ಅವಲೋಕಿಸಬೇಕು, ಈ ಕಾರ್ಯಕ್ಕೆ ಪೊಲೀಸ್, ಕಂದಾಯ ನಿರೀಕ್ಷಕರು, ಗ್ರಾಮಲೆಕ್ಕಿಗರು, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಸೇರಿದಂತೆ ಅಗತ್ಯವಿರುವ ಸಿಬ್ಬಂದಿಗಳನ್ನು ಬಳಸಿಕೊಳ್ಳಬೇಕು, ಅಗತ್ಯವಿದ್ದರೆ ಹೆಚ್ಚುವರಿ ವಾಹನ ಸೇರಿದಂತೆ ಬೇಕಾದ ನೆರವು ಪಡೆಯುವಂತೆ ತಿಳಿಸಿದರು. 

ಗ್ರಾಮಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಸಹಕರಿಸಲು ರಚಿಸಲಾಗಿರುವ ಟಾಸ್ಕ್ ಫೋರ್ಸ್ಗಳ ಸಮಿತಿಯ ಸದಸ್ಯರು ನಿಯೋಜಿತ ಕಾರ್ಯಕ್ಕೆ ಸಹಕರಿಸದಿದ್ದರೆ ಅವರನ್ನು ಅನರ್ಹಗೊಳಿಸಲು ಕ್ರಮಕೈಗೊಳ್ಳಬೇಕು, ಮನೆ ಮನೆ ಸರ್ವೆ ಕಾರ್ಯವನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು, ಮನೆಗಳಲ್ಲಿಯೇ ಪ್ರತ್ಯೇಕವಾಗಿರುವ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಬೇಕು, ಗ್ರಾಮಗಳಲ್ಲಿ ಕಂಟೋನ್ಮೆAಟ್ ವಲಯ ರಚಿಸಬೇಕು, ಸಾರ್ವಜನಿಕರು ಸಂಚರಿಸದAತೆ ಪ್ರಮುಖ ರಸ್ತೆಯನ್ನು ಬಂದ್ ಮಾಡಬೇಕು, ಅನಗತ್ಯವಾಗಿ ಯಾರೂ ಮನೆಯಿಂದ ಹೊರಬರಬಾರದು, ಐಎಲ್‌ಐ ಹಾಗೂ ಎಸ್‌ಎಆರ್‌ಐ ಪ್ರಕರಣಗಳಲ್ಲಿ ಮಾತ್ರ ರ‍್ಯಾಟ್ ತಪಾಸಣೆಗೆ ಒಳಪಡಿಸಬೇಕು, ಕೆಮ್ಮು, ಜ್ವರ, ನೆಗಡಿ ಇದ್ದವರಿಗೆ ಆರ್‌ಟಿ-ಪಿಸಿಆರ್ ತಪಾಸಣೆಗೆ ಒಳಪಡಿಸಬೇಕು, ಗ್ರಾಮ ಭೇಟಿಯಲ್ಲಿ ಈ ಅಂಶಗಳನ್ನು ಪರಿಶೀಲಿಸಬೇಕು ಎಂದರು.  

ಕೋವಿಡ್ ಕೇರ್ ಸೆಂಟರ್ ಹಾಗೂ ಐಸೋಲೇಷನ್‌ನಲ್ಲಿರುವ ಸೋಂಕಿತರಿಗೆ ನೀಡಲಾಗುವ ಮಾತ್ರೆ, ಔಷಧಗಳನ್ನು ಬಳಸುವ ಕುರಿತು ಕನ್ನಡದಲ್ಲಿಯೇ ಬರೆದು ತಿಳಿಸಬೇಕು, ಔಷಧ ಮಾತ್ರೆಯಲ್ಲಿ ಕೊರತೆಯಾದಲ್ಲೀ ಕೂಡಲೇ ಖರೀದಿಸಬೇಕು, ಒಟ್ಟಾರೆ ಗ್ರಾಮಗಳಲ್ಲಿ ಸೋಂಕು ನಿಯಂತ್ರಣಕ್ಕೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರು ವಿವರಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸೀಫ್, ಅಪರ ಜಿಲ್ಲಾಧಿಕಾರಿ ಕೆ.ಆರ್. ದುರುಗೇಶ್, ಅಪರ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ, ಸಹಾಯಕ ಆಯುಕ್ತ ಸಂತೋಷ್ ಕಾಮಗೌಡ, ತಹಶೀಲ್ದಾರ್ ಡಾ. ಹಂಪಣ್ಣ ಸಜ್ಜನ್ ಸೇರಿದಂತೆ ಜಿಲ್ಲೆಯ ಆರೋಗ್ಯ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ವಿಡಿಯೋ ಸಂವಾದದಲ್ಲಿದ್ದರು. 

Latest Indian news

Popular Stories