ಕೊಲೆ ಆರೋಪಿಗೆ ಕಠಿಣ ಶಿಕ್ಷೆ ಆಗಲಿ: ಶಾಂತಪ್ಪ

ರಾಯಚೂರು: ಹುಬ್ಬಳ್ಳಿಯಲ್ಲಿ ಬುಧವಾರ ನಡೆದ ಅಂಜಲಿ ಅಂಬಿಗೇರ (20) ಕೊಲೆ ಆರೋಪಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಪಕ್ಷಪಾತಿ ಮಾಡದೇ ಎಲ್ಲರೂ ಘಟನೆಯನ್ನು ಖಂಡಿಸಬೇಕು ಎಂದು ಗಂಗಾಮತಸ್ಥ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಶಾಂತಪ್ಪ ಒತ್ತಾಯಿಸಿದರು.

ಅವರಿಂದು ಪತ್ರಿಕಾ ಭವನದಲ್ಲಿ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಯುವತಿಯ ಮನೆಗೆ ನುಗ್ಗಿ ಬೆಳ್ಳಂಬೆಳಿಗ್ಗೆ ನಿದ್ರೆಯಲ್ಲಿದ್ದ ಆಕೆಯನ್ನು ಸಾವಿಗೆ ದೂಡಿದ ಕೊಲೆ ಆರೋಪಿ ಗೀರೀಶ ಸಾವಂತ ಯಲ್ಲಪುರ ಓಣಿಯ ನಿವಾಸಿ ಹಾಗೂ ಆಟೋ ಚಾಲಕನೆಂದು ತಿಳಿದುಬಂದಿದ್ದು, ಇಂತಹ ಘಟನೆ ನಡೆದಾಗ ಯಾರೇ ಆದರೂ ಖಂಡಸಬೇಕಿದೆ. ಆದರೆ ನೇಹಾ ಹಿರೇಮಠ ಕೊಲೆಯನ್ನು ಖಂಡಿಸಿ ನಡೆದ ಯಾವ ಹೋರಾಟವೂ ಅಂಜಲಿ ಕೊಲೆಯಲ್ಲಿ ವಿರೋಧ ವ್ಯಕ್ತವಾಗುತ್ತಿಲ್ಲ. ಸಮಾಜದ ಪ್ರತಿಯೊಬ್ಬರೂ ದೊಡ್ಡಮಟ್ಟದಲ್ಲಿ ಧ್ವನಿ ಎತ್ತಬೇಕು ಎಂದು ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮನವಿ ಮಾಡಿದರು.

ನೇಹ ಕೊಲೆಯ ಕುರಿತು ದೃಶ್ಯ ಮಾಧ್ಯಮಗಳು ನಿರಂತರವಾಗಿ ಸುದ್ದಿ ಬಿತ್ತಿರಿಸಿದ್ದವು. ಆದರೆ ಈಗ ಮೌನ ವಹಿಸಿವೆ. ಯಾವುದೇ ಆರೋಪಿಗಳ ವಿಚಾರದಲ್ಲಿ ಮೃದುಧೋರಣೆ ಸಲ್ಲದು. ಕೊಲೆ ಮಾಡುವುದಕ್ಕೆ ಯೋಚನೆ ಮಾಡಬೇಕು ಅಂತಹ ಶಿಕ್ಷೆಯನ್ನು ನೀಡಿದಾಗ ಮಾತ್ರ ಇಂತಹ ಪ್ರಕರಣಗಳು ನಿಲ್ಲಬಹುದೇನೋ ಎಂದು ಹೇಳಿದರು.

ಇಂದಿನ ಯುವಕರು ಎತ್ತ ಸಾಗುತ್ತಿದ್ದಾರೆ. ಪ್ರೀತಿ ಪ್ರೇಮದ ಹೆಸರಿನಲ್ಲಿ ಕೊಲೆಗೈಯುವ ಮಟ್ಟಕ್ಕೆ ತಲುಪುವ ಮನಸ್ಥಿತಿ ಬದಲಾಗಬೇಕಾದರೆ ಇಂತಹ ಪ್ರಕರಣದಲ್ಲಿ ಆರೋಪಿಗಳಿಗೆ ಭಯ ಹುಟ್ಟಿಸುವ ರೀತಿಯಲ್ಲಿ ಶಿಕ್ಷೆಗೊಳಪಡಿಸಬೇಕು.

ಅಂಜಲಿ ಕುಟುಂಬ ತೀರ ಬಡತನ ಹಿನ್ನೆಲೆಹೊಂದಿದ್ದು, ಸಂತ್ರಸ್ಥ ಕುಟುಂಬಕ್ಕೆ ಸರ್ಕಾರ ನೆರವು ನೀಡಬೇಕು. ಕುಟುಂಬ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಮನವಿ ಮಾಡಿದರು.

ಈ ವೇಳೆ ಸಮಾಜದ ಮುಖಂಡರಾದ ಕಡಗೋಲು ಆಂಜನೇಯ, ರಾಮು ಇದ್ದರು.

Latest Indian news

Popular Stories