ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮೊದಲ ವಿಮಾನ ಸೇವೆ ಗುರುವಾರದಿಂದ ಆರಂಭಗೊಂಡಿದೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಿವಮೊಗ್ಗಕ್ಕೆ ತೆರಳಿದ ಮೊದಲ ಇಂಡಿಗೋ ವಿಮಾನವನ್ನು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಸಚಿವ ಎಂ.ಬಿ ಪಾಟೀಲ್, ಶಾಸಕ ಬೇಳೂರು ಗೋಪಾಲಕೃಷ್ಣ, ಸಂಸದ ರಾಘವೇಂದ್ರ, ವಿಜಯೇಂದ್ರ, ಮಾಜಿ ಸಚಿವ ಈಶ್ವರಪ್ಪ ಸೇರಿದಂತೆ ಇನ್ನೂ ಹಲವರು ರಾಜಕೀಯ ಗಣ್ಯರು ಹತ್ತಿ ಸಂತಸಪಟ್ಟರು.
ವಿಮಾನವು 9.50ಕ್ಕೆ ಸರಿಯಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಿವಮೊಗ್ಗಕ್ಕೆ ಹೊರಟಿತು.
ವಿಮಾನ ಹತ್ತುವ ಮೊದಲು ಮಾಧ್ಯಮದೊಂದಿಗೆ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು, “ಎಲ್ಲಾ ಗೌರವಗಳು ಇಲ್ಲಿನ ರೈತರಿಗೆ ಸಲ್ಲಬೇಕು. ಯಾವುದೇ ಅಡ್ಡಿ ಆತಂಕಗಳಿಲ್ಲದೆಯೇ ರೈತರು ಜಾಗ ಬಿಟ್ಟು ಕೊಟ್ಟ ಪರಿಣಾಮ ಶೀಘ್ರಗತಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಸಾಧ್ಯವಾಯಿತು. ನಮಗೆ ಸಹಕಾರ ಕೊಟ್ಟ ಎಲ್ಲಾ ರೈತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇಂದು ನಾವು ವಿಮಾನದಲ್ಲಿ ಇಬ್ಬರು ರೈತರನ್ನು ಕರೆದುಕೊಂಡು ಹೋಗುತ್ತಿದ್ದೇವೆ. ರೈತರ ಆಶೀರ್ವಾದದಿಂದಲೇ ಈ ಕೆಲಸ ಆಗಿದೆ ಎಂದು ಹೇಳಿದರು.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ಶಿವಮೊಗ್ಗ ಅತೀ ದೊಡ್ಡ ವಿಮಾನ ನಿಲ್ದಾಣ ಎಂದು ಹೇಳಲು ಹೆಮ್ಮೆಯಾಗುತ್ತದೆ. ಇಲ್ಲಿ ನೈಟ್ ಲ್ಯಾಡಿಂಗ್ ವ್ಯವಸ್ಥೆಯೂ ಇದೆ. ಸಂಸದ ರಾಘವೇಂದ್ರ ಅವರ ವಿಶೇಷ ಪರಿಶ್ರಮದಿಂದ ಈ ಯೋಜನೆ ಇಂದು ಕಾರ್ಯರೂಪಕ್ಕೆ ಬಂದಿದೆ. ಇದರಿಂದ ಅದೆಷ್ಟೋ ಜನರಿಗೆ ಅನುಕೂಲವಾಗಲಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ವಿಮಾನಗಳು ಓಡಾಟ ಮಾಡುವಂತಾಗಲಿದೆ ಎನ್ನುವ ವಿಶ್ವಾಸ ನನಗಿದೆ ಎಂದು ತಿಳಿಸಿದರು.
ಸಚಿವ ಎಂ.ಬಿ ಪಾಟೀಲ್ ಮಾತನಾಡಿ, ಶಿವಮೊಗ್ಗಕ್ಕೆ ಮೊದಲ ವಿಮಾನ ಸೇವೆ ಪ್ರಾರಂಭವಾಗಿದೆ. ರಾಷ್ಟ್ರಕವಿ ಕುವೆಂಪು ಅವರು ಜನಿಸಿದ ಊರು ಶಿವಮೊಗ್ಗ ಆಗಿರುವುದರಿಂದ ಕುವೆಂಪು ವಿಮಾನ ನಿಲ್ದಾಣವೆಂದೇ ಹೆಸರಿಟ್ಟಿದ್ದೇವೆ. ಒಟ್ಟಾರೆಯಾಗಿ ಇದೊಂದು ಐತಿಹಾಸಿಕ ಕ್ಷಣ. ವಿಮಾನ ಆರಂಭದಿಂದ ಮಧ್ಯ ಕರ್ನಾಟಕಕ್ಕೆ ಬಹಳಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.
ಮಾಜಿ ಸಚಿವ ಈಶ್ವರಪ್ಪ ಮಾತನಾಡಿ, “ರಾಜ್ಯ ವಿಮಾನ ನಿಲ್ದಾಣಗಳ ಸಾಲಿನಲ್ಲಿ ಶಿವಮೊಗ್ಗ ಸೇರಿಕೊಂಡಿರುವುದು ನಮಗೆಲ್ಲರಿಗೂ ತುಂಬಾ ಹೆಮ್ಮೆಯ ವಿಚಾರ. ವಿಶೇಷವಾಗಿ ಕರ್ನಾಟಕದಲ್ಲಿ ಶಿವಮೊಗ್ಗ ಅನೇಕ ವಿಚಾರವಾಗಿ ಪ್ರಸಿದ್ಧಿಯಾಗಿದ್ದರೂ ಕೂಡ ಏರ್ಪೋರ್ಟ್ ಇಲ್ಲ ಎನ್ನುವ ಕೊರತೆ ಇತ್ತು. ಮಾಜಿ ಸಿಎಂ ಯಡಿಯೂರಪ್ಪ ಹಾಗೆಯೇ ಈಗಿನ ಸಂಸದ ರಾಘವೇಂದ್ರ ಅವರ ಪೂರ್ಣ ಪರಿಶ್ರಮದಿಂದ ಇವತ್ತು ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಆಗಿದೆ. ಅವರಿಬ್ಬರಿಗೂ ನಾನು ಅಭಿನಂದನೆ ತಿಳಿಸುತ್ತೇನೆ” ಎಂದರು.
ಸಾಫ್ಟ್ ಲ್ಯಾಂಡಿಂಗ್
ಇಂಡಿಗೋ ಸಂಸ್ಥೆಯ ಎಟಿಎಅರ್ ವಿಮಾನ ಬೆಳಗ್ಗೆ 11 ಗಂಟೆ ಹೊತ್ತಿಗೆ ಲ್ಯಾಂಡ್ ಆಗಿದೆ. ಮೊದಲ ವಿಮಾನ ಶಿವಮೊಗ್ಗ ವಿಮಾನ ನಿಲ್ದಾಣದ ರನ್ ವೇ ಮೇಲೆ ಸಾಫ್ಟ್ ಲ್ಯಾಂಡಿಂಗ್ ಆಗಿದ್ದು, ಈ ರನ್ ವೇ ಬಳಿ ವಿಮಾನಕ್ಕೆ ವಾಟರ್ ಸಲ್ಯೂಟ್ ನೀಡಲಾಯಿತು.