ಬದುಕು ಹಸನಾಗಿಸಿದ ಸಾವಯವ ಕೃಷಿ

ಸ್ಥಳ – ಬೀದರ್

ವಿಶೇಷ ವರದಿ:

ಕೃಷಿಯೆಂದರೆ ಮೂಗು ಮುರಿಯುವ ಕಾಲವಿದು. ಉಳುಮೆಯ ಮಾತು ಕೇಳಿದರೆ ಯುವಕರು ನಗರಕ್ಕೆ ಕಾಲು ಕೀಳುತ್ತಿದ್ದಾರೆ. ಇಂತಹ ಸಮಯದಲ್ಲಿ ಕೃಷಿಯ ಮೂಲಕ ಯಶಸ್ಸು ಕಂಡು, ದುಡಿಮೆಯಲ್ಲಿಯೇ ಸಾಧನೆ ಶಿಖರವೆರುತ್ತಿರುವ ಅಪರೂಪದ ರೈತರೊಬ್ಬರು ಬೀದರ್ ಜಿಲ್ಲೆಯಲ್ಲಿದ್ದಾರೆ. ಈ ಕುರಿತಾದ ಒಂದು ಸ್ಟೋರಿ ಇಲ್ಲಿದೆ ನೋಡಿ.

ರಾಸಾಯನಿಕಗಳಿಂದ ವಿಷಯುಕ್ತವಾದ ಹಣ್ಣು-ಹಂಪಲು, ಧವಸ-ಧಾನ್ಯ, ತರಕಾರಿ ತಿಂದು ಮನುಜರ ಜೊತೆ ಪ್ರಾಣಿಗಳು ಸಹ ಅನಾರೋಗ್ಯದಿಂದ ಬಳಲುತ್ತಿರುವ ಈ ದಿನಗಳಲ್ಲಿ. ಇತ್ತೀಚಿಗೆ ಸಾವಯವ ಕೃಷಿ, ಸಹಜ ಕೃಷಿ ಪದ್ದತಿಗಳ ಬಗ್ಗೆ ಜನರಿಗೆ ಹೆಚ್ಚು ಹೆಚ್ಚು ಅರಿವಾಗಿ, ಕೆಲವರು ಈಗಾಗಲೇ ಈ ಪದ್ದತಿಯನ್ನೂ ಅಳವಡಿಸಿಕೊಂಡು ಯಶಸ್ಸನ್ನು ಕಂಡಿದ್ದಾರೆ. ಹೌದು, ಅಪ್ಪಟ ದೇಶಿಯ ಸಾವಯವ ಕೃಷಿ ಅವಲಂಬಿಸಿ ವಿವಿಧ ಬೆಳೆಗಳನ್ನು ಬೆಳೆದು, ಉತ್ತಮ ಆದಾಯ ಪಡೆಯುತ್ತ, ರೈತ ಸಮೂಹಕ್ಕೆ ಮಾದರಿಯಾಗಿದ್ದಾರೆ ಬೀದರ್ ತಾಲ್ಲೂಕಿನ ಮಂದಕನಳ್ಳಿ ಗ್ರಾಮದ ರೈತ ಚನ್ನಪ್ಪ ಗೌರಶೆಟ್ಟಿ. ಮಣ್ಣು ನಂಬಿ ಬಂಡವಾಳ ಹಾಕಿದರೆ ಭೂ ತಾಯಿ ಎಂದಿಗೂ ಕೈಬಿಡುವುದಿಲ್ಲ ಎಂಬುವುದಕ್ಕೆ ಇವರೇ ಸಾಕ್ಷಿ. ದೃಢ ನಂಬಿಕೆಯಿಂದ ಶ್ರಮವಹಿಸಿ ದುಡಿದು ಯಶಸ್ವಿಯತ್ತ ಸಾಗುತ್ತಿದ್ದಾರೆ ರೈತ ಚನ್ನಪ್ಪ ಗೌರಶೆಟ್ಟಿ. ತಮಗಿರುವ 30 ಎಕರೆ ಜಮೀನಿನಲ್ಲಿ ಶುಂಠಿ, ಕಲ್ಲಂಗಡಿ, ಕಬ್ಬು, ಪಪ್ಪಾಯ, ಚೆಂಡು ಹೂ ಹೀಗೆ ಕಾಲಕಾಲಕ್ಕೆ ಇನ್ನಿತರ ಅನೇಕ ಬೆಳೆಗಳನ್ನು ಬೆಳೆದು ಲಕ್ಷಾಂತರ ರೂ. ಆದಾಯ ಪಡೆದು ಯಶಸ್ಸು ಕಂಡಿದ್ದಾರೆ.

ಚನ್ನಪ್ಪ ಅವರು ತನ್ನ ತಂದೆ ಅವರ ಕೃಷಿ ಮಾರ್ಗದರ್ಶನದಲ್ಲಿ ಬೆಳೆದು ತಮ್ಮ 30 ಎಕರೆ ಜಮೀನಿನಲ್ಲಿ ಒಂದು ಬಾವಿ, 3 ಕೊಳವೆ ಬಾವಿಯ ಮೂಲಕ ಸಂಪೂರ್ಣ ನೀರಾವರಿ ಮಾಡುತ್ತಿದ್ದಾರೆ.

ಇದೀಗ 3 ಎಕರೆ ಪಪ್ಪಾಯ, 8 ಎಕರೆ ಕಬ್ಬು ಬೆಳೆದು ಆದಾಯದ ನಿರೀಕ್ಷೆಯಲ್ಲಿದ್ದಾರೆ. ಪಪ್ಪಾಯಗೆ ಸುಮಾರು 2.5 ರೂ. ಲಕ್ಷ ಖರ್ಚಾಗಿದೆ. ಪಪ್ಪಾಯ ಬೆಳೆಯಿಂದ ಈಗಾಗಲೇ 1 ಲಕ್ಷ ರೂ. ಗಳಿಸಿದ್ದೇನೆ. ಈಗ ಪಪ್ಪಾಯ ವಾರಕ್ಕೆ ಒಂದು ಸಾರಿ ಕಟಾವಿಗೆ ಬರುತ್ತಿದೆ. ಪಪ್ಪಾಯ ಬೆಳೆಯನ್ನು ನಾವು ಕಡಿಯುವುದಿಲ್ಲ. ಬದಲಾಗಿ ವ್ಯಾಪಾರಿಗಳೇ ನೇರವಾಗಿ ಹೊಲಕ್ಕೆ ಬಂದು ಪಪ್ಪಾಯ ನೋಡಿ ಸ್ಥಳದಲ್ಲಿಯೇ ಬೆಲೆ ನಿಗದಿಪಡಿಸಿ ಹಣ ನೀಡಿ ಖರೀದಿಸುತ್ತಾರೆ. ಇದರಿಂದ ಪಪ್ಪಾಯ ಕಡಿಯುವ, ಸಾಗಿಸುವ ವೆಚ್ಚ ಎಲ್ಲವೂ ಉಳಿಯುತ್ತದೆ. ಪಪ್ಪಾಯಿ ಹಣ್ಣಿನಲ್ಲಿ ಸುಮಾರು 10 ಲಕ್ಷ ಆದಾಯ ಬರುವ ನಿರೀಕ್ಷೆ ಇದೆ ಮತ್ತು ಎಲ್ಲಾ ಬೆಳೆಗಳಲ್ಲಿ ಖರ್ಚು ವೆಚ್ಚ ಹೋಗಿ ತಿಂಗಳಿಗೆ 1 ಲಕ್ಷ 50 ಸಾವಿರ ಕೈ ಸೇರುತ್ತದೆ ಎನ್ನುತ್ತಾರೆ ರೈತ ಚನ್ನಪ್ಪ ಗೌರಶೆಟ್ಟಿ.‌‌

ಒಟ್ಟಿನಲ್ಲಿ ಕೃಷಿ ನಂಬಿ ಕಷ್ಟಪಟ್ಟು ದುಡಿದರೆ ಉತ್ತಮ ಆದಾಯ ಗಳಿಸಬಹುದು. ಕೇವಲ ಐದು ಎಕರೆ ನೀರಾವರಿ ಭೂಮಿ ಇದ್ದರೆ ಸಾಕು ಸಾಫ್ಟ್‌ವೇರ್ ಎಂಜಿನಿಯರ್ ಕ್ಕಿಂತಲೂ ಹೆಚ್ಚು ಸಂಬಳ ಪಡೆಯಬಹುದು ಎಂಬುವುದಕ್ಕೆ ಇವರೇ ಸಾಕ್ಷಿ. ಆದರೆ, ಏಕಾಗ್ರತೆ, ತಾಳ್ಮೆ, ಶ್ರಮ ಇರಬೇಕಷ್ಟೇ.

Latest Indian news

Popular Stories