ಏಷಿಯಾ ಕಪ್: ಬಾಂಗ್ಲಾ ಎದುರು ಪಾಕಿಸ್ಥಾನಕ್ಕೆ ಭರ್ಜರಿ ಗೆಲುವು

ಲಾಹೋರ್‌: ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ಪಾಕಿಸ್ಥಾನ ತಂಡವು ಏಷ್ಯಾ ಕಪ್‌ ಕ್ರಿಕೆಟ್‌ ಕೂಟದ ಬುಧವಾರದ ಮೊದಲ ಸೂಪರ್‌ ಫೋರ್‌ ಹಂತದ ಪಂದ್ಯದಲ್ಲಿ ಬಾಂಗ್ಲಾ ದೇಶವನ್ನು 7 ವಿಕೆಟ್‌ಗಳಿಂದ ಸೋಲಿಸಿದೆ.

ಗೆಲ್ಲಲು ಸುಲಭ ಸವಾಲು ಪಡೆದ ಪಾಕಿಸ್ಥಾನ ತಂಡವು ಇಮಾಮ್‌ ಉಲ್‌ ಹಕ್‌ ಮತ್ತು ಮೊಹಮ್ಮದ್‌ ರಿಜ್ವಾನ್‌ ಅವರ ಭರ್ಜರಿ ಆಟದಿಂದಾಗಿ 39.3 ಓವರ್‌ಗಳಲ್ಲಿ 3 ವಿಕೆಟಿಗೆ 194 ರನ್‌ ಪೇರಿಸಿ ಜಯಭೇರಿ ಬಾರಿಸಿತು. ಪಾಕಿಸ್ಥಾನವು ಇನ್ನು ಸೆ. 10ರಂದು ನಡೆಯುವ ಸೂಪರ್‌ ಫೋರ್‌ ಹಂತದ ಪಂದ್ಯದಲ್ಲಿ ಭಾರತವನ್ನು ಎದುರಿಸಲಿದೆ.

ಪಾಕಿಸ್ಥಾನದ ಆರಂಭ ಉತ್ತಮವಾಗಿತ್ತು. ಆರಂಭಿಕರಾದ ಫ‌ಕಾರ್‌ ಜಮಾನ್‌ ಮತ್ತು ಇಮಾಮ್‌ ಉಲ್‌ ಹಕ್‌ ತಾಳ್ಮೆಯ ಆಟವಾಡಿ ತಂಡವನ್ನು ಆಧರಿಸುವ ಪ್ರಯತ್ನ ಮಾಡಿದರು. ಅವರಿಬ್ಬರು ಮೊದಲ ವಿಕೆಟಿಗೆ 35 ರನ್‌ ಪೇರಿಸಿ ಬೇರ್ಪಟ್ಟರು. ಆಬಳಿಕ ಇಮಾಮ್‌ ಅವರನ್ನು ಸೇರಿಕೊಂಡ ನಾಯಕ ಬಾಬರ್‌ ಆಜಂ ತಂಡವನ್ನು ರಕ್ಷಿಸುವ ಭಾರ ಹೊತ್ತರು.

ಇಮಾಮ್‌ ಮತ್ತು ಮೊಹಮ್ಮದ್‌ ರಿಜ್ವಾನ್‌ ಭರ್ಜರಿ ಆಟದ ಪ್ರದರ್ಶನ ನೀಡಿ ತಂಡಕ್ಕೆ ಗೆಲುವನ್ನು ಖಚಿತಪಡಿಸಿದರು. ಮೂರನೇ ವಿಕೆಟಿಗೆ 84 ರನ್ನುಗಳ ಜತೆಯಾಟದಲ್ಲಿ ಭಾಗಿಯಾದರು. ಶತಕದತ್ತ ದಾಪುಗಾಲು ಹಾಕುತ್ತಿದ್ದ ಇಮಾಮ್‌ ಅವರು ಭರ್ಜರಿ ಹೊಡೆತಕ್ಕೆ ಯತ್ನಿಸಿ ಮೆಹಿದಿಗೆ ಕ್ಲೀನ್‌ಬೌಲ್ಡ್‌ ಆದರು. 84 ಎಸೆತ ಎದುರಿಸಿದ ಅವರು 5 ಬೌಂಡರಿ ಮತ್ತು 4 ಸಿಕ್ಸರ್‌ ನೆರವಿನಿಂದ 78 ರನ್‌ ಹೊಡೆದರು.

ಇಮಾಮ್‌ ಅವರಿಗೆ ಉತ್ತಮ ಬೆಂಬಲ ನೀಡಿದ ರಿಜ್ವಾನ್‌ ಇನ್ನಷ್ಟು ಕುಸಿತ ಆಗದಂತೆ ನೋಡಿಕೊಂಡರು. ಪಂದ್ಯ ಗೆದ್ದಾಗ 63 ರನ್‌ ಗಳಿಸಿ ಆಡುತ್ತಿದ್ದರು. 79 ಎಸೆತ ಎದುರಿಸಿದ ಅವರು 7 ಬೌಂಡರಿ ಮತ್ತು 1 ಸಿಕ್ಸರ್‌ ಬಾರಿಸಿದ್ದರು.

ನಾಟಕೀಯ ಕುಸಿತ
ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶವು ಪಾಕಿಸ್ಥಾನದ ಬಿಗು ದಾಳಿಗೆ ರನ್‌ ಗಳಿಸಲು ಒದ್ದಾಡಿತು. ಆದರೂ ನಾಯಕ ಶಕಿಬ್‌ ಅಲ್‌ ಹಸನ್‌ ಮತ್ತ ಮುಶ್ಫಿಕರ್‌ ರಹೀಂ ಅವರ ತಾಳ್ಮೆಯ ಅರ್ಧಶತಕದಿಂದಾಗಿ ತಂಡದ ಮೊತ್ತ 193ರ ಗಳಿಸಿತು. ಎರಡು ಬಾರಿ ನಾಟಕೀಯ ಕುಸಿತ ತಂಡ ಬಾಂಗ್ಲಾದೇಶವು 38.4 ಓವರ್‌ಗಳಲ್ಲಿ 193 ರನ್ನಿಗೆ ಆಲೌಟಾಯಿತು. ಎರಡು ಬಾರಿ ನಾಟಕೀಯ ಕುಸಿತ ಕಂಡ ಬಾಂಗ್ಲಾದೇಶವು ಬೇಗನೇ ಆಲೌಟಾಯಿತು. ಶಕಿಬ್‌ ಮತ್ತು ರಹೀಂ ಅವರ ಅರ್ಧಶತಕ ಮತ್ತು ಅವರಿಬ್ಬರ ನಡುವೆ 100 ರನ್ನುಗಳ ಜತೆಯಾಟದ ಹೊರತಾಗಿಯೂ ಬಾಂಗ್ಲಾ ದೊಡ್ಡ ಮೊತ್ತ ಪೇರಿಸಲು ವಿಫ‌ಲವಾಯಿತು.

ಆರಂಭದಲ್ಲಿಯೇ ಬ್ಯಾಟಿಂಗ್‌ ಕುಸಿತಕ್ಕೆ ಒಳಗಾದ ಬಾಂಗ್ಲಾದೇಶವು 47 ರನ್‌ ಗಳಿಸುವಷ್ಟರಲ್ಲಿ 4 ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿತ್ತು. ಆಬಳಿಕ ಶಕಿಬ್‌ ಮತ್ತು ರಹೀಂ ತಂಡವನ್ನು ಆಧರಿಸಿದರು. ಕೊನೆ ಹಂತದಲ್ಲಿ ಮತ್ತೆ ಕುಸಿತ ಕಂಡ ಬಾಂಗ್ಲಾದೇಶು 30ರಿಂದ 39 ಓವರ್‌ ನಡುವೆ 47 ರನ್‌ ಅಂತರದಲ್ಲಿ ಕೊನೆಯ ಆರು ವಿಕೆಟ್‌ ಕಳೆದುಕೊಂಡು ಆಲೌಟಾಯಿತು.

ಸಂಕ್ಷಿಪ್ತ ಸ್ಕೋರು
ಬಾಂಗ್ಲಾದೇಶ 38.4 ಓವರ್‌ಗಳಲ್ಲಿ 193 (ಮೊಹಮ್ಮದ್‌ ನೈಮ್‌ 20, ಶಕಿಬ್‌ ಅಲ್‌ ಹಸನ್‌ 53, ಮುಶ್ಫಿಕರ್‌ ರಹೀಂ 64, ಹ್ಯಾರಿಸ್‌ ರವೂಫ್ 19ಕ್ಕೆ 4, ನಸೀಮ್‌ ಶಾ 34ಕ್ಕೆ 3); ಪಾಕಿಸ್ಥಾನ 39.3 ಓವರ್‌ಗಳಲ್ಲಿ 3 ವಿಕೆಟಿಗೆ 194 (ಫ‌ಕಾರ್‌ ಜಮಾನ್‌ 20, ಇಮಾಮ್‌ ಉಲ್‌ ಹಕ್‌ 78, ಮೊಹಮ್ಮದ್‌ ರಿಜ್ವಾನ್‌ 63 ಔಟಾಗದೆ).

Latest Indian news

Popular Stories