1ನೇ ಏಕದಿನ; ನಜ್ಮುಲ್‌ ಶತಕ, ಲಂಕಾ ವಿರುದ್ಧ ಬಾಂಗ್ಲಾಕ್ಕೆ ಜಯ

ನಾಯಕ ನಜ್ಮುಲ್‌ ಹುಸೇನ್‌ ಅವರ ಅಜೇಯ ಶತಕ ಬಾಂಗ್ಲಾ ಚೇಸಿಂಗ್‌ನ ಆಕರ್ಷಣೆ ಆಗಿತ್ತು. ಮೊದಲು ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾ 48.5 ಓವರ್‌ಗಳಲ್ಲಿ 255ಕ್ಕೆ ಆಲೌಟ್‌ ಆದರೆ, ಬಾಂಗ್ಲಾದೇಶ ಆರಂಭಿಕ ಕುಸಿತದಿಂದ ಚೇತರಿಸಿಕೊಂಡೂ 44.4 ಓವರ್‌ಗಳಲ್ಲಿ 4 ವಿಕೆಟಿಗೆ 257 ರನ್‌ ಬಾರಿಸಿ ಗೆಲುವು ಸಾಧಿಸಿತು. ಆಗ ನಜ್ಮುಲ್‌ ಹುಸೇನ್‌ 122 ಮತ್ತು ಮುಶ್ಫೀಕರ್‌ ರಹೀಂ 73 ರನ್‌ ಮಾಡಿ ಅಜೇಯರಾಗಿದ್ದರು.

ನಜ್ಮುಲ್‌-ರಹೀಂ ಮುರಿಯದ 5ನೇ ವಿಕೆಟಿಗೆ 165 ರನ್‌ ಪೇರಿಸಿ ತಂಡವನ್ನು ಯಶಸ್ವಿಯಾಗಿ ದಡ ಸೇರಿಸಿದರು. ಬಾಂಗ್ಲಾದ 4 ವಿಕೆಟ್‌ 92 ರನ್ನಿಗೆ ಬಿದ್ದಿತ್ತು. ಮೊದಲ ಎಸೆತದಲ್ಲೇ ಲಿಟನ್‌ ದಾಸ್‌ (0) ವಿಕೆಟ್‌ ಬಿದ್ದೊಡನೆ ಕ್ರೀಸಿಗೆ ಆಗಮಿಸಿದ ನಜ್ಮುಲ್‌ ಹುಸೇನ್‌ ಕಪ್ತಾನನ ಆಟಕ್ಕೆ ಉತ್ತಮ ನಿದರ್ಶನ ಒದಗಿಸಿದರು. ಅವರ 122 ರನ್‌ 129 ಎಸೆತಗಳಿಂದ ದಾಖಲಾಯಿತು. ಸಿಡಿಸಿದ್ದು 13 ಫೋರ್‌ ಮತ್ತು 2 ಸಿಕ್ಸರ್‌. ಇದು ಅವರ 3ನೇ ಶತಕ ಹಾಗೂ ಜೀವನಶ್ರೇಷ್ಠ ಗಳಿಕೆ.

ರಹೀಂ 84 ಎಸೆತಗಳಿಂದ 73 ರನ್‌ ಮಾಡಿದರು (8 ಬೌಂಡರಿ). ಈ ನಡುವೆ ಮಹಮದುಲ್ಲ 37 ರನ್‌ ಕೊಡುಗೆ ಸಲ್ಲಿಸಿದರು. ಶ್ರೀಲಂಕಾ ಸರದಿಯಲ್ಲಿ ಜನಿತ್‌ ಲಿಯನಗೆ ಸರ್ವಾಧಿಕ 67, ಕುಸಲ್‌ ಮೆಂಡಿಸ್‌ 59 ರನ್‌ ಹೊಡೆದರು.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ-48.5 ಓವರ್‌ಗಳಲ್ಲಿ 255 (ಜನಿತ್‌ ಲಿಯನಗೆ 67, ಕುಸಲ್‌ ಮೆಂಡಿಸ್‌ 59, ನಿಸ್ಸಂಕ 36, ತಾಂಜಿಮ್‌ ಹಸನ್‌ 44ಕ್ಕೆ 3, ಟಸ್ಕಿನ್‌ ಅಹ್ಮದ್‌ 60ಕ್ಕೆ 3, ಶೊರೀಫ‌ುಲ್‌ ಇಸ್ಲಾಮ್‌ 51ಕ್ಕೆ 3). ಬಾಂಗ್ಲಾದೇಶ-44.4 ಓವರ್‌ಗಳಲ್ಲಿ 4 ವಿಕೆಟಿಗೆ 257 (ನಜ್ಮುಲ್‌ ಔಟಾಗದೆ 122, ರಹೀಂ ಔಟಾಗದೆ 73, ಮಹಮದುಲ್ಲ 37, ಮಧುಶಂಕ 44ಕ್ಕೆ 2). ಪಂದ್ಯಶ್ರೇಷ್ಠ: ನಜ್ಮುಲ್‌ ಹುಸೇನ್‌.

Latest Indian news

Popular Stories