Asia Cup; ಬಾಂಗ್ಲಾ ಎದುರು ಶ್ರೀಲಂಕಾಗೆ 5 ವಿಕೆಟ್‌ಗಳ ಜಯ

ಪಲ್ಲೆಕೆಲೆ: ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ಶ್ರೀಲಂಕಾ ತಂಡವು ಗುರುವಾರ ನಡೆದ ಏಷ್ಯಾ ಕಪ್‌ ಕ್ರಿಕೆಟ್‌ ಕೂಟದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 5 ವಿಕೆಟ್‌ಗಳಿಂದ ಸೋಲಿಸಿದೆ.

ಗೆಲ್ಲಲು 165 ರನ್‌ ತೆಗೆಯುವ ಸುಲಭ ಸವಾಲು ಪಡೆದ ಶ್ರೀಲಂಕಾ ಆರಂಭದಲ್ಲಿ ಎಡವಿತು. 43 ರನ್‌ ಗಳಿಸುವಷ್ಟರಲ್ಲಿ ಮೂರು ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿತ್ತು. ಆದರೆ ಸದೀರ ಸಮರವಿಕ್ರಮ ಮತ್ತು ಚರಿತ ಅಸಲಂಕ ಅವರ ಜವಾಬ್ದಾರಿಯ ಆಟದಿಂದಾಗಿ ಶ್ರೀಲಂಕಾ ತಂಡವು ಚೇತರಿಸಿ ಕೊಂಡಿತಲ್ಲದೇ ಅಂತಿಮವಾಗಿ 39 ಓವರ್‌ಗಳಲ್ಲಿ 5 ವಿಕೆಟಿಗೆ 165 ರನ್‌ ಗಳಿಸಿ ಜಯಭೇರಿ ಬಾರಿಸಿತು. ಈ ಮೊದಲು ಬಾಂಗ್ಲಾದೇಶ 42.4 ಓವರ್‌ಗಳಲ್ಲಿ 164 ರನ್‌ ಗಳಿಸಿತ್ತು.

ಸಮರವಿಕ್ರಮ ಮತ್ತು ಅಸಲಂಕ ಅವರು ನಾಲ್ಕನೇ ವಿಕೆಟಿಗೆ 78 ರನ್‌ ಪೇರಿಸಿದ್ದರಿಂದ ಶ್ರೀಲಂಕಾ ಸುಲಭವಾಗಿ ಗೆಲುವಿನತ್ತ ಹೊರಟಿತು. ಆದರೆ ಸಮರವಿಕ್ರಮ 54 ರನ್‌ ಗಳಿಸಿದ ವೇಳೆ ಔಟಾದರು. ಆಬಳಿಕ ಅಸಲಂಕ ಮತ್ತು ದಾಸುನ್‌ ಶಣಕ ಇನ್ನಷ್ಟು ಕುಸಿತ ಆಗದಂತೆ ನೋಡಿಕೊಂಡು ತಂಡದ ಗೆಲುವು ಸಾರಿದರು. ಅಸಲಂಕ ಕೊನೆಗೂ 62 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಈ ಮೊದಲು ಶ್ರೀಲಂಕಾ ಬೌಲರ್‌ಗಳ ಬಿಗು ದಾಳಿಯೆದುರು ರನ್‌ ಗಳಿಸಲು ಒದ್ದಾಡಿದ ಬಾಂಗ್ಲಾ ಆಟಗಾರರು ಆಗಾಗ್ಗೆ ವಿಕೆಟ್‌ ಕಳೆದುಕೊಂಡು ಆಘಾತ ಅನುಭವಿಸಿದರು. ಅಗ್ರಕ್ರಮಾಂಕದ ನಜ್ಮುಲ್‌ ಹೊಸೈನ್‌ ಶಂಟೂ ಅವರ ತಾಳ್ಮೆಯ ಆಟದಿಂದಾಗಿ ಬಾಂಗ್ಲಾ ಸ್ವಲ್ಪಮಟ್ಟಿಗೆ ಚೇತರಿಸಿಕೊಳ್ಳುವಂತಾಯಿತು. 122 ಎಸೆತ ಎದುರಿಸಿದ ಅವರು 89 ರನ್‌ ಗಲಿಸಿ ತಂಡವನ್ನು ಭಾರೀ ಕುಸಿತದಿಂದ ಪಾರು ಮಾಡಿದರು.
ಶಂಟೂ ಅವರನ್ನು ಹೊರತುಪಡಿಸಿದರೆ 20 ರನ್‌ ಗಳಿಸಿದ ತೌಹಿದ್‌ ಹೃದಯ್‌ ತಂಡದ ಎರಡನೇ ಗರಿಷ್ಠ ರನ್‌ ಸ್ಕೋರರ್‌ ಆಗಿದ್ದಾರೆ. ಆರಂಭಿಕ ಮೊಹಮ್ಮದ್‌ ನೈಮ್‌ ಮತ್ತು ಮುಶ್ಫಿಕರ್‌ ರಹೀಮ್‌ ಎರಡಂಕೆಯ ಮೊತ್ತ ಗಳಿಸಿದ ಇನ್ನಿಬ್ಬರು ಆಟಗಾರರಾಗಿದ್ದಾರೆ.

ಈ ವರ್ಷ ನಡೆದ ಏಕದಿನ ಪಂದ್ಯಗಳಲ್ಲಿ ಶ್ರೀಲಂಕಾ ಪರ ಗರಿಷ್ಠ ವಿಕೆಟ್‌ ಪಡೆದಿರುವ ತೀಕ್ಷಣ 19 ರನ್ನಿಗೆ 2 ವಿಕೆಟ್‌ ಪಡೆದರೆ ಮತೀಷ ಪತಿರಣ 32 ರನ್ನಿಗೆ 4 ವಿಕೆಟ್‌ ಹಾರಿಸಿದರು.

Latest Indian news

Popular Stories