ಸುಂದರನಗರದಲ್ಲಿ ವಿಶೇಷ ಚೇತನರ ಸ್ವಸಹಾಯ ಸಂಘ ರಚನೆ

ಮಡಿಕೇರಿ ಮಾ. 20 : ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಎನ್.ಜಿ.ಓ ಸಂಸ್ಥೆ ವತಿಯಿಂದ ಕೂಡುಮಂಗಳೂರು ಗ್ರಾ.ಪಂ ನ ಸುಂದರನಗರದಲ್ಲಿ ವಿಶೇಷ ಚೇತನರ ಸ್ವಸಹಾಯ ಸಂಘವನ್ನು ರಚಿಸಲಾಯಿತು.

ಕೂಡುಮಂಗಳೂರು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಅವರು ಸಂಘವನ್ನು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ವಿಶೇಷ ಚೇತನರ ಸಮಗ್ರ ಆರೈಕೆ, ಬೆಂಬಲ ಮತ್ತು ಚಿಕಿತ್ಸೆಗಾಗಿ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆಯು ಸ್ವಸಹಾಯ ಸಂಘವನ್ನು ರಚನೆ ಮಾಡಿರುವುದು ಶ್ಲಾಘನೀಯ.

ವಿಶೇಷ ಚೇತನರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕಾಗಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದ್ದು, ಫಲಾನುಭವಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.


ಸಂಸ್ಥೆಯ ತಾಲ್ಲೂಕು ಮೇಲ್ವಿಚಾರಕ ಸುರೇಶ್ ಮಾತನಾಡಿ, ವಿಶೇಷ ಚೇತನರಿಗೆ ಸಂಸ್ಥೆಯಿಂದ ಸಿಗಬಹುದಾದ ಯೋಜನೆಗಳ ಬಗ್ಗೆ ಸವಿವರವಾಗಿ ತಿಳಿಸಿದರು.


ನಂತರ ಸ್ವಸಹಾಯ ಸಂಘಕ್ಕೆ ರವಿಕಿರಣ್ ಸ್ವಸಹಾಯ ಸಂಘ ಎಂದು ನಾಮಕರಣ ಮಾಡಲಾಯಿತು. ರವಿಕಿರಣ್ ವಿಶೇಷ ಚೇತನರ ಸ್ವಸಹಾಯ ಸಂಘ ಮೊದಲನೇ ಪ್ರತಿನಿಧಿಯಾಗಿ ಅಮವಾಸೆ ಹಾಗೂ ಎರಡನೇ ಪ್ರತಿನಿಧಿಯಾಗಿ ತುಳಸಿರವರನ್ನು ಆಯ್ಕೆ ಮಾಡಲಾಯಿತು.


ನಂತರ ಮೇಲ್ವಿಚಾರಕ ಸುರೇಶ್ ಅವರು, ಸಂಘಕ್ಕೆ ಅವಶ್ಯಕತೆಯಿರುವ ಲೆಡ್ಜರ್ ಹಾಗೂ ಪಾಸ್ ಬುಕ್ ಗಳಿಗೆ ಪಂಚಾಯಿತಿಯಿಂದ ಧನಸಹಾಯ ನೀಡುವಂತೆ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರ ಬಳಿ
ಮನವಿ ಮಾಡಿದರು.

ಈ ಬಗ್ಗೆ ಅಧ್ಯಕ್ಷರು ಹಾಗು ಪಿಡಿಓ ಬಳಿ ಮಾತನಾಡುತ್ತೇನೆ ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ತಿಳಿಸಿದರು.


ಈ ಸಂದರ್ಭ ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ನ ಆರೋಗ್ಯ ಕಾರ್ಯಕರ್ತ ಸಂಜು.ಜಿ.ವಿ ಹಾಗೂ ಸುಂದರನಗರದ ಹತ್ತಕ್ಕೂ ಹೆಚ್ಚು ವಿಶೇಷ ಚೇತನರು ಉಪಸ್ಥಿತರಿದ್ದರು.

Latest Indian news

Popular Stories