ICC T20 World Cup 2024:ಭಾರತ ಸೆಮಿಸ್’ಗೆ

ಸೆಂಟ್ ಲೂಸಿಯಾ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಭರ್ಜರಿ ಜಯ ದಾಖಲಿಸಿದ್ದು, ಸೆಮೀಸ್ ಗೆ ಲಗ್ಗೆ ಇರಿಸಿದೆ.

ಇಂದು ಸೆಂಟ್ ಲೂಸಿಯಾದ ಡರೆನ್ ಸಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಿರ್ಣಾಯಕ ಪಂದ್ಯದಲ್ಲಿ ಭಾರತ ನೀಡಿದ್ದ 206ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಆಸ್ಟ್ರೇಲಿಯಾ ತಂಡ ನಿಗದಿತ 20 ಓವರ್ ನಲ್ಲಿ 181 ರನ್ ಗಳಿಸಿ 24 ರನ್ ಗಳ ಅಂತರದಲ್ಲಿ ಸೋಲು ಕಂಡಿತು.

ಭಾರತ ನೀಡಿದ್ದ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಕೇವಲ 6ರನ್ ಗಳಿಸಿ ವಾರ್ನರ್ ಅರ್ಶ್ ದೀಪ್ ಸಿಂಗ್ ಗೆ ವಿಕೆಟ್ ಒಪ್ಪಿಸಿದರು. ಆದರೆ ಈ ಹಂತದಲ್ಲಿ ಜೊತೆಗೂಡಿದ ಟ್ರಾವಿಸ್ ಹೆಡ್ ಮತ್ತು ಮಿಚೆಲ್ ಮಾರ್ಶ್ 81ರನ್ ಗಳ ಅಮೋಘ ಜೊತೆಯಾಟವಾಡಿದರು.

ಈ ಜೋಡಿ ಭಾರತೀಯ ಬೌಲರ್ ಗಳ ಮೇಲೆ ಅಕ್ಷರಶಃ ಸವಾರಿ ಮಾಡಿತು. ಒಂದು ಹಂತದಲ್ಲಿ ಪಂದ್ಯ ಭಾರತ ತಂಡದ ಕೈತಪ್ಪುವ ಅಪಾಯ ಕೂಡ ಇತ್ತು. ಈ ಹಂತದಲ್ಲಿ ಅಕ್ಸರ್ ಪಟೇಲ್ ಹಿಡಿದ ಕ್ಯಾಚ್ ಇಡೀ ಪಂದ್ಯದ ಗತಿಯನ್ನೇ ಬದಲಿಸಿತು.

ಅಕ್ಸರ್ ಪಟೇಲ್ ಅದ್ಭುತ ಕ್ಯಾಚ್

ಭಾರತ ತಂಡಕ್ಕೆ ಅಪಾಯಕಾರಿಯಾಗಿ ಬ್ಯಾಟ್ ಮಾಡುತ್ತಿದ್ದ ಮಿಚೆಲ್ ಮಾರ್ಶ್ ಅಕ್ಸರ್ ಪಟೇಲ್ ಹಿಡಿದ ಅದ್ಭುತ ಕ್ಯಾಚ್ ಗೆ ಬಲಿಯಾದರು. ಕುಲದೀಪ್ ಯಾದವ್ ಎಸೆದ 9ನೇ ಓವರ್ ನ ಕೊನೆಯ ಎಸೆತದಲ್ಲಿ ಮಾರ್ಶ್ ಅದ್ಭುತ ಹೊಡೆತಕ್ಕೆ ಮುಂದಾಗಿ ಅಕ್ಸರ್ ಪಟೇಲ್ ಕ್ಯಾಚಿತ್ತು ಔಟಾದರು. ಓವರ್ ನ ಕೊನೆಯ ಎಸೆತವನ್ನು ಸಿಕ್ಸರ್ ಗೆ ಅಟ್ಟಲು ಮಾರ್ಶ್ ಯತ್ನಿಸಿದರೂ ಬೌಂಡರಿ ಲೈನ್ ಬಳಿ ಅಕ್ಸರ್ ಪಟೇಲ್ ಆ ಎಸೆತವನ್ನು ಅದ್ಭುತವಾಗಿ ಜಂಪ್ ಮಾಡಿ ಹಿಡಿತಕ್ಕೆ ಪಡೆಯುವಲ್ಲಿ ಯಶಸ್ವಿಯಾದರು. ಆ ಮೂಲಕ ಇಡೀ ಪಂದ್ಯಕ್ಕೆ ಮೊದಲ ತಿರುವು ನೀಡಿದರು.

ಬಳಿಕ ಹೆಡ್ ಜೊತೆಗೂಡಿದ ಗ್ಲೇನ್ ಮ್ಯಾಕ್ಸ್ ವೆಲ್ ಕೂಡ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಕೇವಲ 12 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 2 ಬೌಂಡರಿ ಸಹಿತ 20 ರನ್ ಗಳಿಸಿ ಮ್ಯಾಕ್ಸ್ ವೆಲ್ ಕುಲದೀಪ್ ಯಾದವ್ ಗೆ ವಿಕೆಟ್ ಒಪ್ಪಿಸಿದರು. ಈ ವಿಕೆಟ್ ಉರುಳುತ್ತಿದ್ದಂತೆಯೇ ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕ ದಿಢೀರ್ ಪತನವಾಯಿತು. 2ರನ್ ಗೆ ಮಾರ್ಕಸ್ ಸ್ಟಾಯಿನಸ್ ಔಟಾದರೆ, ಟಿಮ್ ಡೇವಿಡ್ 15ರನ್ ಮತ್ತು ಮ್ಯಾಥ್ಯೂವೇಡ್ 1 ರನ್ ಗಳಿಸಿ ಅರ್ಶ್ ದೀಪ್ ಸಿಂಗ್ ಗೆ ವಿಕೆಟ್ ಒಪ್ಪಿಸಿದರು.

ಈ ಹಂತದಲ್ಲಿ 76 ರ್ ಗಳಿಸಿ ಅಪಾಯಕಾರಿಯಾಗಿ ಆಡುತ್ತಿದ್ದ ಟ್ರಾವಿಸ್ ಹೆಡ್ ರನ್ನು ಬುಮ್ರಾ ಔಟ್ ಮಾಡಿದರು. ಈ ಮೂಲಕ ಪಂದ್ಯ ಭಾರತ ಪಾಲಾಗುವುದು ಸ್ಪಷ್ಟವಾಯಿತು. ಅಂತಿಮವಾಗಿ ಆಸ್ಟ್ರೇಲಿಯಾ ತಂಡ ನಿಗಧಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿ 24 ರನ್ ಗಳ ಅಂತರದಲ್ಲಿ ಭಾರತದ ವಿರುದ್ಧ ಸೋಲೊಪ್ಪಿಕೊಂಡಿತು.

ಅಂದಹಾಗೆ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೆಮೀಸ್ ಗೇರಲು ಭಾರತ ನೀಡಿದ್ದ ಗುರಿಯನ್ನು 15.2 ಓವರ್ ನಲ್ಲಿ ಮುಟ್ಟಬೇಕಿತ್ತು. ಹೀಗಾಗಿ ಈ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದಿದ್ದರೂ ಭಾರತ ಸೆಮೀಸ್ ಗೇರುವುದು ಸ್ಪಷ್ಟವಾಗಿತ್ತು.

Latest Indian news

Popular Stories