ಬೆಂಗಳೂರು: ಹಂಗರಿಯ ಬುದಾಫೆಸ್ಟ್ ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್‌ಷಿಪ್ ನಲ್ಲಿ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದ ಗೋಲ್ಡನ್ ಬಾಯ್ ನೀರಜ್ ಚೋಪ್ರಾ, ಗುರುವಾರ (ಆಗಸ್ಟ್ 31) ನಡೆದ ಜೂರಿಚ್ ಡೈಮಂಡ್ ಲೀಗ್ ನಲ್ಲಿ 85.71 ಮೀಟರ್ ದೂರ ಭರ್ಜಿ ಎಸೆದು 2ನೇ ಸ್ಥಾನ ಪಡೆದರೆ, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದ ಝೆಕ್ ಗಣರಾಜ್ಯದ ಜಾಕೊಬ್ ವಾಡ್ಲಿಚ್ ಮೊದಲ ಸ್ಥಾನಕ್ಕೇರಿದ್ದಾರೆ.
ನೀರಜ್ ಚೋಪ್ರಾ ಅವರು ತಮ್ಮ ಮೊದಲ ಎಸೆತದಲ್ಲಿ 80.79 ಮೀಟರ್ ದೂರ ಭರ್ಜಿ ಎಸೆದರೆ, 4ನೇ ಪ್ರಯತ್ನದಲ್ಲಿ 85.22 ಮೀಟರ್, 6ನೇ ಪ್ರಯತ್ನದಲ್ಲಿ 85.71 ಮೀಟರ್ ದೂರ ಎಸೆದು ಜಾಕೊಬ್ ವಾಡ್ಲಿಚ್ (85.86) ಗೆ ಪ್ರಬಲ ಪೈಪೋಟಿ ನೀಡಿದರೂ, ಕೆಲವೇ ಅಂತರದಿಂದ ಮೊದಲ ಸ್ಥಾನ ಪಡೆಯುವಲ್ಲಿ ಎಡವಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಜರ್ಮನಿಯ ಜುಲೆನ್ ವೆಬೆರ್ (85.04) 3ನೇ ಸ್ಥಾನ ಪಡೆದರು.
ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ, ತಮ್ಮ 2, 3 ಮತ್ತು 5ನೇ ಪ್ರಯತ್ನದಲ್ಲಿ ಫೌಲ್ ಮಾಡಿದ್ದರು. ಇತ್ತೀಚೆಗೆ ನಡೆದ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್‌ಷಿಪ್‌ನ ಫೈನಲ್ ಸುತ್ತಿನ ಮೊದಲ ಪ್ರಯತ್ನದಲ್ಲೂ ನೀರಜ್ ಫೌಲ್ ಮಾಡಿದ್ದರೂ ಮರು ಎಸೆತದಲ್ಲೇ 88.17ಮೀಟರ್ ದೂರ ಭರ್ಜಿ ಎಸೆದು ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ದಾಖಲೆ ಬರೆದಿದ್ದರು.