ನವದೆಹಲಿ: ಶ್ರೀಲಂಕಾ ವಿರುದ್ಧ ಅದ್ಭುತ ಬೌಲಿಂಗ್ ಮೂಲಕ ಏಷ್ಯಾಕಪ್ ಫೈನಲ್ ಪಂದ್ಯ ಗೆದ್ದುಕೊಟ್ಟ ಭಾರತ ಕ್ರಿಕೆಟ್ ತಂಡದ ವೇಗಿ ಮಹಮದ್ ಸಿರಾಜ್ ಗೆ ಎಸ್ ಯುವಿ ನೀಡಿ ಎಂಬ ಅಭಿಮಾನಿ ಮನವಿಗೆ ಮಹೀಂದ್ರಾ ಸಂಸ್ಥೆಯ ಮಾಲೀಕ ಆನಂದ್ ಮಹೀಂದ್ರ ನೀಡಿರುವ ಉತ್ತರ ವೈರಲ್ ಆಗುತ್ತಿದೆ.
ಏಷ್ಯಾ ಕಪ್ ಏಕದಿನ ಕ್ರಿಕೆಟ್ ಫೈನಲ್ ನಲ್ಲಿ ಅಮೋಘ ಪ್ರದರ್ಶನದ ನಂತರ ಮೊಹಮ್ಮದ್ ಸಿರಾಜ್ ಅವರಿಗೆ ಎಸ್‌ಯುವಿ ಉಡುಗೊರೆಯಾಗಿ ನೀಡುವಂತೆ ಅಭಿಮಾನಿಗಳು ಆನಂದ್ ಮಹೀಂದ್ರಾ ಅವರನ್ನು ಕೇಳಿದ್ದಾರೆ. ಅವರ ಉತ್ತರ ಇದೀಗ ವೈರಲ್ ಆಗುತ್ತಿದೆ. ನಿನ್ನೆ ಕೊಲಂಬೊದಲ್ಲಿ ಮೋಡ ಕವಿದ ವಾತಾವರಣದ ನಡುವೆಯೂ ಪ್ರಶಸ್ತಿ ಹಣಾಹಣಿಯಲ್ಲಿ ಶ್ರೀಲಂಕಾದ ಅಗ್ರ ಕ್ರಮಾಂಕವನ್ನು ನಿರ್ದಯವಾಗಿ ಕಿತ್ತುಹಾಕಿದ ಭಾರತೀಯ ಕ್ರಿಕೆಟ್ ತಂಡದ ವೇಗಿ ಮಹಮದ್ ಸಿರಾಜ್ ಬೆಂಕಿ ಬೌಲಿಂಗ್ ಮಾಡಿದರು. ಕೇವಲ ಒಂದೇ ಓವರ್ ನಲ್ಲಿ 4 ವಿಕೆಟ್ ಪಡೆದು ಶ್ರೀಲಂಕಾ ತಂಡ ಅತ್ಯಲ್ಪ ಮೊತ್ತಕ್ಕೆ ಕುಸಿಯಲು ಕಾರಣರಾದರು. ಸಿರಾಜ್ ಬೆಂಕಿ ಬೌಲಿಂಗ್ ಮತ್ತು ಬುಮ್ರಾ ಶಿಸ್ತಿನ ಬೌಲಿಂಗ್ ಮಾಡಿ 1 ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯಾ 3 ವಿಕೆಟ್ ಪಡೆದು ಮಿಂಚಿದರು.
ಶ್ರೀಲಂಕಾ ತಂಡ ಕೇವಲ 15.2 ಓವರ್ ನಲ್ಲೇ ಕೇವಲ 50ರನ್ ಗಳಿಗೆ ಆಲೌಟ್ ಆಯಿತು. ಈ ಸುಲಭದ ಮೊತ್ತವನ್ನು ಬೆನ್ನು ಹತ್ತಿದ ಭಾರತ ಕೇವಲ 6.1 ಓವರ್ ನಲ್ಲಿ ವಿಕೆಟ್ ನಷ್ಟವಿಲ್ಲದೇ 51 ರನ್ ಗಳಿಸಿ 10 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿತು. ಕೊನೆಯ 90 ನಿಮಿಷಗಳಲ್ಲಿ ಸಿರಾಜ್ 6 ವಿಕೆಟ್‌ಗಳನ್ನು ಗಳಿಸುವ ಮೂಲಕ ಹಲವಾರು ದಾಖಲೆಗಳನ್ನು ಮುರಿದರು. ಅದರಲ್ಲಿ ನಾಲ್ಕು ವಿಕೆಟ್‌ಗಳು ಒಂದೇ ಓವರ್‌ನಲ್ಲಿ ಬಂದವು.
ಇನ್ನು ಸಿರಾಜ್ ಅವರ ಈ ಅದ್ಭುತ ಬೌಲಿಂಗ್ ಮತ್ತು ಭಾರತ ತಂಡದ ಪ್ರದರ್ಶನದ ಕುರಿತು ಕೈಗಾರಿಕೋದ್ಯಮಿ ಆನಂದ್ ಮಹೀಂದ್ರ ಅವರು ವಿಶೇಷ ಪ್ರಶಂಸೆ ವ್ಯಕ್ತಪಡಿಸಿದರು. ಅಲ್ಲದೇ ಸಿರಾಜ್ ರನ್ನುಮಾರ್ವೆಲ್ ಎಂದು ಬಣ್ಣಿಸಿದ್ದಾರೆ. ಇನ್ನು ಈ ಟ್ವೀಟ್ ಗೆ ಅಭಿಮಾನಿಯೊಬ್ಬರು ಪ್ರತಿಕ್ರಿಯಿಸಿ ಸಿರಾಜ್ ಗೆ ಕಾರನ್ನು ಉಡುಗೊರೆಯಾಗಿ ನೀಡಿ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಆನಂದ್ ಮಹೀಂದ್ರಾ ಅದನ್ನು ಈಗಾಗಲೇ ಮಾಡಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಮಹೀಂದ್ರಾ ಸಂಸ್ಥೆ 2021 ರಲ್ಲಿಯೇ ಸಿರಾಜ್‌ಗೆ ‘ಥಾರ್’ ಕಾರನ್ನು ಉಡುಗೊರೆಯಾಗಿ ನೀಡಿತ್ತು.