ದಕ್ಷಿಣ ಆಫ್ರಿಕಾ | ಗಾಯಗೊಂಡ ಇಬ್ಬರು ವೇಗಿಗಳು; ವಿಶ್ವಕಪ್ ತಂಡದಲ್ಲಿ ಮಹತ್ವದ ಬದಲಾವಣೆ

ಜೋಹಾನ್ಸಬರ್ಗ್: ಮುಂದಿನ ತಿಂಗಳಿನಿಂದ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಕೂಟಕ್ಕಾಗಿ ಈಗಾಗಲೇ ನೇಮಿಸಿರುವ ತಂಡವನ್ನು ದಕ್ಷಿಣ ಆಫ್ರಿಕಾ ಮಂಡಳಿ ಮತ್ತೆ ಬದಲಾವಣೆ ಮಾಡಿದೆ. ಇಬ್ಬರು ವೇಗಿಗಳು ಗಾಯಗೊಂಡ ಕಾರಣ ಅನಿವಾರ್ಯವಾಗಿ ಸ್ಕ್ವಾಡ್ ಬದಲಾವಣೆ ಮಾಡಿಕೊಂಡಿದೆ.

ಹರಿಣಗಳ ತಂಡದ ಸ್ಟಾರ್ ವೇಗಿಗಳಾದ ಆನ್ರಿಚ್ ನೋಕಿಯಾ ಮತ್ತು ಸಿಸಾಂಡ ಮಗಲಾ ಅವರು ಗಾಯಗೊಂಡ ಕಾರಣ ವಿಶ್ವಕಪ್ ಕೂಟದಿಂದ ಹೊರಬಿದ್ದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಇಬ್ಬರು ವೇಗಿಗಳು ಗಾಯಕ್ಕೆ ಒಳಗಾಗಿದ್ದರು.

ಇದೀಗ ಅವರ ಬದಲಿಗೆ ಆಲ್ ರೌಂಡರ್ ಆ್ಯಂಡಿಲೋ ಫಿಲುಕುವಾಯೋ ಮತ್ತು ವೇಗಿ ಲಿಜಾಡ್ ವಿಲಿಯಮ್ಸ್ ಅವರನ್ನು ವಿಶ್ವಕಪ್ ನ 15ರ ಬಳಗಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಕೋಚ್ ರಾಬ್ ವಾಲ್ಟರ್ ಹೇಳಿದ್ದಾರೆ.

“ಅಂತಿಮಗೊಳಿಸಿದ 15 ಆಟಗಾರರ ತಂಡದಲ್ಲಿ ಆಲ್‌ರೌಂಡರ್ ಆ್ಯಂಡಿಲೋ ಫಿಲುಕುವಾಯೋ ಮತ್ತು ಟೈಟಾನ್ಸ್ ಸೀಮ್ ಬೌಲರ್ ಲಿಜಾಡ್ ವಿಲಿಯಮ್ಸ್ ಅವರನ್ನು ವಾಲ್ಟರ್ ಹೆಸರಿಸಿದ್ದಾರೆ”ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ತಂಡದ ಬಗ್ಗೆ ಪ್ರತಿಕ್ರಿಯಿಸಿದ ವಾಲ್ಟರ್ “50-ಓವರ್‌ ಗಳ ವಿಶ್ವಕಪ್‌ ನಲ್ಲಿ ಅನ್ರಿಚ್ ಮತ್ತು ಸಿಸಾಂಡಾ ತಪ್ಪಿಸಿಕೊಂಡಿರುವುದು ತುಂಬಾ ನಿರಾಶಾದಾಯಕವಾಗಿದೆ. ಇಬ್ಬರೂ ಪ್ರೋಟೀಸ್‌ ಗೆ ಅಪಾರ ಮೌಲ್ಯವನ್ನು ಸೇರಿಸುವ ಗುಣಮಟ್ಟದ ಆಟಗಾರರು. ಅವರು ಸ್ಪರ್ಧಾತ್ಮಕ ಕ್ರಮಕ್ಕೆ ಮರಳಲು ಅವರು ಕೆಲಸ ಮಾಡುವಾಗ ಅಗತ್ಯವಿರುವ ಎಲ್ಲಾ ಬೆಂಬಲವನ್ನು ನೀಡುವುದನ್ನು ಮುಂದುವರಿಸುತ್ತೇವೆ” ಎಂದಿದ್ದಾರೆ.

ದಕ್ಷಿಣ ಆಫ್ರಿಕಾ ತಂಡ: ಟೆಂಬಾ ಬವುಮಾ (ನಾ), ಜೆರಾಲ್ಡ್ ಕೊಯೆಟ್ಜಿ, ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಏಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಆಂಡಿಲ್ ಫಿಲುಕುವಾಯೋ, ಕಗಿಸೊ ರಬಾಡಾ, ತಬ್ರೈಜ್ ಶಮ್ಸಿ, ರಸ್ಸಿ ವಾನ್ ಡರ್ ಡ್ಯುಸೆನ್, ಲಿಜಾಡ್ ವಿಲಿಯಮ್ಸ್.

 

 

Latest Indian news

Popular Stories