T20 WORLDCUP : ಐತಿಹಾಸಿಕ ಜಯ… ಸೌತ್ ಆಫ್ರಿಕಾ ಫೈನಲ್​ಗೆ

ಟಿ20 ವಿಶ್ವಕಪ್​ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ್ ವಿರುದ್ಧ ಭರ್ಜರಿ ಜಯ ಸಾಧಿಸಿ ಸೌತ್ ಆಫ್ರಿಕಾ ತಂಡ ಫೈನಲ್​ಗೆ ಪ್ರವೇಶಿಸಿದೆ.

ವಿಶ್ವಕಪ್ ಇತಿಹಾಸದಲ್ಲಿ ಇದು ಸೌತ್ ಆಫ್ರಿಕಾ ತಂಡದ ಮೊದಲ ಸೆಮಿಫೈನಲ್ ಗೆಲುವು ಎಂಬುದು ವಿಶೇಷ. ಅಂದರೆ 1992 ರಿಂದ ವಿಶ್ವಕಪ್​ನಲ್ಲಿ ಕಣಕ್ಕಿಳಿಯುತ್ತಿರುವ ಆಫ್ರಿಕನ್ನರು ಒಮ್ಮೆಯೂ ಫೈನಲ್​ಗೆ ಪ್ರವೇಶಿಸಿರಲಿಲ್ಲ. ಇದೀಗ ಅಫ್ಘಾನಿಸ್ತಾನ್ ತಂಡವನ್ನು ಬಗ್ಗು ಬಡಿದು ಚೊಚ್ಚಲ ಬಾರಿ ಫೈನಲ್ ಸುತ್ತಿಗೆ ಪ್ರವೇಶಿಸಿದೆ.

ಇದಕ್ಕೂ ಮುನ್ನ ಟ್ರಿನಿಡಾಡ್​ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ್ ತಂಡದ ನಾಯಕ ರಶೀದ್ ಖಾನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ಮೊದಲ ಓವರ್​ನಿಂದಲೇ ಕರಾರುವಾಕ್ ದಾಳಿ ಸಂಘಟಿಸಿದ ಸೌತ್ ಆಫ್ರಿಕಾ ಬೌಲರ್​ಗಳು ಆರಂಭದಲ್ಲೇ ಆಘಾತ ನೀಡುವಲ್ಲಿ ಯಶಸ್ವಿಯಾದರು.

ಮಾರ್ಕೊ ಯಾನ್ಸೆನ್ ಮೊದಲ ಓವರ್​ನಲ್ಲೇ ರಹಮಾನುಲ್ಲಾ ಗುರ್ಬಾಝ್ (0) ವಿಕೆಟ್ ಪಡೆದರೆ, ಆ ಬಳಿಕ ಬಂದ ಗುಲ್ಬದ್ದಿನ್ ನೈಬ್ (9) ಕ್ಲೀನ್ ಬೌಲ್ಡ್ ಆದರು. ಇನ್ನು ಇಬ್ರಾಹಿಂ ಝದ್ರಾನ್ (2) ರಬಾಡ ಎಸೆತದಲ್ಲಿ ವಿಕೆಟ್ ಕೈಚೆಲ್ಲಿದರು.

ಇದರ ನಡುವೆ ಅಝ್ಮತುಲ್ಲಾ ಒಮರ್​ಝಾಹಿ 10 ರನ್​ಗಳಿಸಿದರೂ ಅನ್ರಿಕ್ ನೋಕಿಯಾ ಎಸೆತದಲ್ಲಿ ಔಟಾದರು. ಇನ್ನು ಅನುಭವಿ ಬ್ಯಾಟರ್ ಮೊಹಮ್ಮದ್ ನಬಿ ಸೊನ್ನೆ ಸುತ್ತಿದರೆ, ನಂಗೆಯಾಲಿಯಾ ಖರೋಟೆ 2 ರನ್​ಗಳಿಸಿ ಔಟಾದರು. ಪರಿಣಾಮ 23 ರನ್​ ಕಲೆಹಾಕುವಷ್ಟರಲ್ಲಿ ಅಫ್ಘಾನಿಸ್ತಾನ್ ತಂಡವು 5 ವಿಕೆಟ್ ಕಳೆದುಕೊಂಡಿತು.

ಆ ಬಳಿಕ ಬಂದ ಕರೀಮ್ ಜನ್ನತ್ (8) ಮತ್ತು ರಶೀದ್ ಖಾನ್ (8) ಅಲ್ಪ ಹೊತ್ತು ಕ್ರೀಸ್​ನಲ್ಲಿದ್ದರು. ಇವರಿಬ್ಬರ ಪತನದೊಂದಿಗೆ ಪೆವಿಲಿಯನ್ ಪರೇಡ್ ಮುಂದುವರೆಸಿದ ಅಫ್ಘಾನಿಸ್ತಾನ್ ತಂಡ 11.5 ಓವರ್​ಗಳಲ್ಲಿ 56 ರನ್​ಗಳಿಸಿ ಆಲೌಟ್ ಆಯಿತು.

ಸೌತ್ ಆಫ್ರಿಕಾ ಪರ ತಬ್ರೇಝ್ ಶಂಸಿ ಹಾಗೂ ಮಾರ್ಕೊ ಯಾನ್ಸೆನ್ ತಲಾ 3 ವಿಕೆಟ್ ಪಡೆದರೆ, ಕಗಿಸೊ ರಬಾಡ ಹಾಗೂ ಅನ್ರಿಕ್ ನೋಕಿಯಾ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.

ಕೇವಲ 57 ರನ್​ಗಳ ಟಾರ್ಗೆಟ್:
ಕೇವಲ 57 ರನ್​ಗಳ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಫಝಲ್ಹಕ್ ಫಾರೂಖಿ ಎಸೆದ 2ನೇ ಓವರ್​ನ 5ನೇ ಎಸೆತದಲ್ಲಿ ಕ್ವಿಂಟನ್ ಡಿಕಾಕ್ (5) ಕ್ಲೀನ್ ಬೌಲ್ಡ್ ಆದರು. ಈ ಹಂತದಲ್ಲಿ ಜೊತೆಗೂಡಿದ ರೀಝ ಹೆಂಡ್ರಿಕ್ಸ್ ಹಾಗೂ ಐಡೆನ್ ಮಾರ್ಕ್ರಾಮ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೆ 8.5 ಓವರ್​ಗಳಲ್ಲಿ 57 ರನ್​ಗಳ ಗುರಿ ಮುಟ್ಟುವ ಮೂಲಕ ಸೌತ್ ಆಫ್ರಿಕಾ ತಂಡವು 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಈ ಗೆಲುವಿನೊಂದಿಗೆ ಸೌತ್ ಆಫ್ರಿಕಾ ತಂಡವು ಟಿ20 ವಿಶ್ವಕಪ್​ನಲ್ಲಿ ಮೊದಲ ಬಾರಿಗೆ ಫೈನಲ್​ಗೆ ಪ್ರವೇಶಿಸಿದೆ. ಅಲ್ಲದೆ ಜೂನ್ 29 ರಂದು ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಭಾರತ ಅಥವಾ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

Latest Indian news

Popular Stories