ಹಿಮಾಚಲ ಪ್ರದೇಶ |ಭೂಕುಸಿತದಿಂದಾಗಿ ದೇಗುಲದಲ್ಲಿ ಕಾಲ್ತುಳಿತ: 2ಸಾವು, 7ಮಂದಿಗೆ ಗಾಯ

ಊನಾ: ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿ ಸೋಮವಾರ ಭೂಕುಸಿತದಿಂದಾಗಿ ದೇಗುಲದಲ್ಲಿ ಕಾಲ್ತುಳಿತ ಸಂಭವಿಸಿ ಇಬ್ಬರು ಭಕ್ತರು ಮೃತಪಟ್ಟು, 7 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂಬ ಉಪವಿಭಾಗದ ಮೈರಿ ಗ್ರಾಮದಲ್ಲಿರುವ ಡೇರಾ ಬಾಬಾ ವಡ್‌ಭಾಗ್‌ ಸಿಂಗ್ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ.

ಮೃತರನ್ನು ಪಂಜಾಬ್‌ನ ಫರೀದ್‌ಕೋಟ್ ನಿವಾಸಿಗಳಾದ ಬಿಲ್ಲಾ ಮತ್ತು ಬಲ್ವೀರ್ ಚಂದ್ ಎಂದು ಗುರುತಿಸಲಾಗಿದೆ.

ಇಂದು (ಸೋಮವಾರ) ಬಾಬಾ ವಡ್‌ಭಾಗ್‌ ಸಿಂಗ್ ಜಾತ್ರೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಭಕ್ತರು ಮುಂಜಾನೆ 5 ಗಂಟೆ ಸುಮಾರಿಗೆ ಚರಣ ಗಂಗಾ ಸ್ನಾನ ಮಾಡುತ್ತಿದ್ದಾಗ ಭೂಕುಸಿತ ಸಂಭವಿದೆ. ಈ ವೇಳೆ ನಾಲ್ಕೈದು ದೊಡ್ಡ ಕಲ್ಲುಗಳು ಪರ್ವತದಿಂದ ಜಾರಿ ಕೆಳಗೆ ಬಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಚರಣ ಗಂಗಾ ಸ್ನಾನವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಸೋಮವಾರದ ಹುಣ್ಣಿಮೆಯ ಕಾರಣ, ಈ ಪ್ರದೇಶದಲ್ಲಿ ಸಾಕಷ್ಟು ಜನಸಂದಣಿ ಇತ್ತು.

ಪರ್ವತದಿಂದ ಕಲ್ಲುಗಳು ಉರುಳುತ್ತಿರುವುದನ್ನು ನೋಡಿದ ಜನರು ಅಲ್ಲಿ ಓಡಲು ಪ್ರಾರಂಭಿಸಿದರು. ಇದರಿಂದ ಕಾಲ್ತುಳಿತ ಸಂಭವಿಸಿತು. ಘಟನೆಯಲ್ಲಿ 9 ಮಂದಿ ಭಕ್ತರು ಗಾಯಗೊಂಡರು. ಎಲ್ಲಾ ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರಲ್ಲಿ ಇಬ್ಬರು ಭಕ್ತರು ಮೃತಪಟ್ಟಿದ್ದಾರೆ.

Latest Indian news

Popular Stories