ಶಾಲಾ-ಕಾಲೇಜು, ದೇವಸ್ಥಾನದ ಆವರಣದಲ್ಲಿ ಏಕ ಬಳಕೆ ಪ್ಲಾಸ್ಟಿಕ್‌ ಬಳಕೆಗೆ ನಿಷೇಧ!

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಶಾಲಾ-ಕಾಲೇಜು, ದೇವಸ್ಥಾನಗಳ ಆವರಣಗಳಲ್ಲಿ ಏಕ ಬಳಕೆ ಪ್ಲಾಸ್ಟಿಕ್‌’ಗೆ ನಿಷೇಧ ಮಾಡಲಾಗಿದೆ. ಒಂದು ವೇಳೆ ಬಳಕೆ ಮಾಡಿದ್ದೇ ಆದರೆ, ದಂಡ ಹಾಗೂ ಶಿಕ್ಷೆ ವಿಧಿಸಲಾಗುವುದು ಎಂದು ಬಿಬಿಎಂಪಿ ಆದೇಶ ಹೊರಡಿಸಿದೆ.

ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಗಳು-2016ಗಳು ಮತ್ತು ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಆದೇಶ ಹೊರಡಿಸಲಾಗಿದ್ದು, ಯಾವ ರೀತಿ ಕ್ರಮ ಕೈಗೊಳ್ಳಬೇಕೆಂಬುದನ್ನೂ ಸೂಚಿಸಲಾಗಿದೆ.

ಸೂಕ್ತ ನಿರ್ವಹಣಾ ತಂತ್ರಗಳನ್ನು ರೂಪಿಸುವ ಮೂಲಕ ಏಕ-ಬಳಕೆಯ ಪ್ಲಾಸ್ಟಿಕ್‌ಗಳ ಬಳಕೆಯನ್ನು ನಿಯಂತ್ರಿಸಬೇಕು ಮತ್ತು ಹಂತಹಂತವಾಗಿ ನಿರ್ಮೂಲನೆ ಮಾಡಬೇಕು ಎಂದು ಪಾಲಿಕೆ ಹೇಳಿದೆ.

ನಿಯಮಗಳಲ್ಲಿ ಗುರುತಿಸಲಾದ ಏಕಬಳಕೆ ಪ್ಲಾಸ್ಟಿಕ್ ವಸ್ತುಗಳ ಮೇಲೆ ವಿಧಿಸಲಾದ ನಿರ್ದಿಷ್ಟ ನಿಷೇಧಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಏಕಬಳಕೆ ಪ್ಲಾಸ್ಟಿಕ್ ಬದಲಾಗಿ ಬಟ್ಟೆ ಅಥವಾ ಕಾಗದದಿಂದ ತಯಾರಾದ ವಸ್ತುಗಳನ್ನು ಬಳಸಬೇಕು.

ನಿಯಮಗಳನ್ನು ಪಾಲಿಸಲು ವಿಫಲವಾದರೆ ಘನತ್ಯಾಜ್ಯ ನಿರ್ವಹಣಾ ಬೈ-ಲಾ ಪ್ರಕಾರ ದಂಡ ವಿಧಿಸಲಾಗುವುದು. ಪಾಲಿಕೆಯಿಂದ ಹೊರಡಿಸಲಾದ ವಿವಿಧ ಆದೇಶಗಳು ಮತ್ತು ನಿಬಂಧನೆಗಳ ಉಲ್ಲಂಘನೆಯು ದಂಡದ ಷರತ್ತು ಮತ್ತು ಕ್ರಮವನ್ನು ಪರಿಗಣಿಸಿ ಕ್ರಮಕೈಗೊಳ್ಳಲಾಗುತ್ತದೆ.

ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಮತ್ತು ಏಕಬಳಕ ಪ್ಲಾಸ್ಟಿಕ್ ಬಳಸುವ ಪರಂಪರೆಯ ಅಭ್ಯಾಸವನ್ನು ತೊಡೆದುಹಾಕಲು ನಿರಂತರ ಪ್ರಯತ್ನಗಳನ್ನು ಮಾಡಬೇಕು. ವಿದ್ಯಾರ್ಥಿಗಳಲ್ಲಿ ‘ಏಕಬಳಕ ಪ್ಲಾಸ್ಟಿಕ್ ತ್ಯಜಿಸಿ’ ಎಂಬ ವಿಷಯದ ಮೇಲೆ ಸ್ಪರ್ಧೆಗಳನ್ನು ನಿಯಮಿತವಾಗಿ ಆಯೋಜಿಸಬೇಕು ಎಂದು ಬಿಬಿಎಂಪಿ ಘನತ್ಯಾಜ್ಯ ನಿರ್ವಹಣಾ ವಿಭಾಗದ ಜಂಟಿ ನಿರ್ದೇಶಕಿ ಪ್ರತಿಭಾ ಅವರು ಆದೇಶದಲ್ಲಿ ತಿಳಿಸಿದ್ದಾರೆ.

Latest Indian news

Popular Stories