ಗೃಹಸಚಿವರ ಕ್ಷೇತ್ರದಲ್ಲಿಯೇ ‘ದಲಿತ’ ಪೇದೆಯ ಮೇಲೆ ‘ಪಿಎಸ್‌ಐ’ ಹಲ್ಲೆ ಆರೋಪ

ತುಮಕೂರು: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿನಿಧಿಸುವ ಕೊರಟಗೆರೆಯಲ್ಲಿಯೇ ದಲಿತ ಪೇದೆ ಮೇಲೆ ಪಿಎಸ್‌ಐ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕೊರಟಗೆರೆ ಪೊಲೀಸ್ ಠಾಣೆಯ ಪಿಎಸ್‌ಐ ಚೇತನ್ ಗೌಡ, ಹೆಡ್‌ಕಾನ್‌ಸ್ಟೇಬಲ್ ರಂಗನಾಥ್ ಎಂಬುವರ ಮೇಲೆ ಹಲ್ಲೆ ಮಾಡಿದ್ದು, ಪೇದೆ ರಂಗನಾಥ್ ಕೊರಟಗೆರೆ ಸರ್ಕಲ್ ಇನ್‌ಸ್ಪೆಕ್ಟರ್‌ಗೆ ಲಿಖಿತವಾಗಿ ದೂರು ನೀಡಿದ್ದು, ಎರಡು ದಿನಗಳಿಂದ ಕರ್ತವ್ಯಕ್ಕೆ ಗೈರಾಗಿದ್ದಾರೆ.

ಮಧುಗಿರಿಯಿಂದ ವರ್ಗಾವಣೆಯಾಗಿ ಕೊರಟಗೆರೆಗೆ ಬಂದಿದ್ದ ಹೆಡ್‌ಕಾನ್‌ಸ್ಟೇಬಲ್ ರಂಗನಾಥ್ ಅವರಿಗೆ 112 ಡ್ಯೂಟಿ ನೀಡಲಾಗಿದ್ದು, ಎರಡು ದಿನಗಳ ಹಿಂದೆ 8ರಿಂದ8 ಗಂಟೆಯವರೆಗೆ 112 ಡ್ಯೂಟಿಯನ್ನು ಮಾಡಿ, ಠಾಣೆ ಬಂದ ರಂಗನಾಥ್ ಅವರಿಗೆ ಡ್ಯೂಟಿ ಮುಂದುವರೆಸಲು ಪಿಎಸ್‌ಐ ಚೇತನ್‌ಗೌಡ ಸೂಚಿಸಿದ್ದಾರೆ.

ಈಗಾಗಲೇ 12 ಗಂಟೆ ನಿರಂತರವಾಗಿ ಕೆಲಸ ಮಾಡಿದ್ದು, ಈಗ ಮುಂದುವರೆಸುವುದು ಹೇಗೆ? ಠಾಣೆಯಲ್ಲಿ ಇರುವ ಬೇರೆಯವರಿಗೂ ಡ್ಯೂಟಿ ನೀಡಿ ಎಂದು ರಂಗನಾಥ್ ಪಿಎಸ್‌ಐ ಚೇತನ್‌ಗೌಡಗೆ ಮನವಿ ಮಾಡಿದರೂ ಸಹ ಚೇತನ್‌ಗೌಡ ಅವರು ರಂಗನಾಥ್ ಅವರನ್ನೇ ಡ್ಯೂಟಿ ಮುಂದುವರೆಸುವಂತೆ ಒತ್ತಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಘಟನೆಯ ಬಗ್ಗೆ ಮುಖ್ಯಪೇದೆ ರಂಗನಾಥ್ ಅವರು ಸರ್ಕಲ್ ಇನ್‌ಸ್ಪೆಕ್ಟರ್‌ಗೆ ದೂರು ಸಲ್ಲಿಸಿದ್ದು, ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರವಾಣಿ ಮೂಲಕ ಸರ್ಕಲ್ ಇನ್‌ಸ್ಪೆಕ್ಟರ್ ಮಾಹಿತಿ ನೀಡಿದ್ದಾರೆ.

Latest Indian news

Popular Stories