ಹಿಂದೂಗಳ ಭಾವನೆಗೆ ನೋವಾಗುವಂತಹ ಕೆಲಸ ಮಾಡಿಲ್ಲ: ಜಾತ್ರೆಗಳಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಲು ಮುಸ್ಲಿಮ್ ವ್ಯಾಪರಸ್ಥರ ಮನವಿ

ಉಡುಪಿ: ಇದುವರೆಗೆ ನಾವೆಲ್ಲರೂ ಅಣ್ಣ ತಮ್ಮಂದಿರಂತೆ ಹಿಂದೂ ಮುಸ್ಲಿಂ ಸಮುದಾಯದವರು ಒಟ್ಟಿಗೆ ವ್ಯಾಪಾರ ಮಾಡಿಕೊಂಡು ಬಂದಿದ್ದು, ಎಂದೂ ಕೂಡ ಹಿಂದೂ ಭಾಂಧವರಿಗೆ ನೋವಾಗು ಕೆಲಸ ನಾವು ಮಾಡಿಲ್ಲ. ಹಿಂದೂ ದೇವಸ್ಥಾನದ ಜಾತ್ರೆಗಳಲ್ಲಿ, ಹಬ್ಬಗಳಲ್ಲಿ ಮುಸ್ಲಿಂ ಸಮುದಾಯದವರಿಗೂ ವ್ಯಾಪಾರ ಮಾಡಲು ಅವಕಾಶ ನೀಡಿ ಎಂದು ಉಡುಪಿ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರು ಹಾಗೂ ಜಾತ್ರಾ ವ್ಯಾಪಾರಸ್ಥರ ಒಕ್ಕೂಟದ ಕಾರ್ಯದರ್ಶಿ ಮೊಹಮ್ಮದ್‌ ಆರಿಫ್‌ ಮನವಿ ಮಾಡಿದರು.

ಸೋಮವಾರ ಉಡುಪಿ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾಪು ಮಾರಿಗುಡಿ ಜಾತ್ರೆಯಲ್ಲಿ ಮುಸ್ಲಿಂ ಸಮುದಾಯದವರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ಫಲಕ ಹಾಕಲಾಗಿದ್ದು ಈಗ ಪಡುಬಿದ್ರೆ ದೇವಸ್ಥಾನದಲ್ಲಿ ಕೂಡ ಅಂತಹ ಫಲಕ ಹಾಕಲಾಗಿದೆ ನಮ್ಮಿಂದ ಏನು ತಪ್ಪಾಗಿದೆ ಎನ್ನುವುದು ನಮಗೆ ತಿಳಿದಿಲ್ಲ.

ಈ ಹಿಂದೆ ನಾವು ಹಿಂದೂ ಮುಸ್ಲಿಂ ಭಾಂಧವರು ಎಲ್ಲಾ ಕಡೆ ದೇವಸ್ಥಾನಗಳಲ್ಲಿ ಒಟ್ಟಾಗಿ ವ್ಯಾಪಾರ ಮಾಡುತ್ತಿದ್ದೆವು ಆದರೆ ವಡಭಾಂಡೇಶ್ವರದಿಂದ ಮುಸ್ಲಿಂ ವ್ಯಾಪಾರಸ್ಥರಿಗೆ ಆರಂಭವಾದ ನಿರ್ಬಂಧ ಈಗಾ ಪೆರ್ಡೂರು, ಪೆರ್ಣಂಕಿಲ, ಪಡುಬಿದ್ರೆ ದೇವಸ್ಥಾನದ ಜಾತ್ರೆಯಲ್ಲಿ ಕೂಡ ಮುಸ್ಲಿಂ ಭಾಂಧವರಿಗೆ ಅಂಗಡಿ ಇಡಲು ವ್ಯಾಪಾರ ನಡೆಸಲು ಅನುಮತಿ ನೀಡುತ್ತಿಲ್ಲ. ಯಾವುದೋ ಸಂಘಟನೆಗಳು ಇಂತಹ ಕರೆಗಳನ್ನು ನೀಡುತ್ತಿದ್ದಾರೆ ಆದರೆ ಎಂದೂ ಕೂಡ ನಾವು ಹಿಂದೂ ಬಾಂಧವರಿಗೆ ನೋವಾಗುವ ಕೆಲಸ ಮಾಡಿಲ್ಲ ಮುಂದೆ ಮಾಡುವುದು ಇಲ್ಲ. ಒಂದು ವೇಳೆ ದೇವಸ್ಥಾನದ ಆಡಳಿತ ಮಂಡಳಿ ಈ ಕುರಿತು ನಮ್ಮನ್ನು ಮಾತುಕತೆಗೆ ಕರೆದರೆ ಖಂಡಿತವಾಗಿ ಹೋಗುತ್ತೇವೆ ಎಂದರು.

ಕೋವಿಡ್‌ ನಿಂದಾಗಿ ಕಳೆದ ಎರಡು ವರ್ಷಗಳಿಂದ ಯಾವುದೇ ಜಾತ್ರೆಗಳು ನಡೆಯುತ್ತಿರಲಿಲ್ಲ ಇತ್ತೀಚೆಗೆ ಸ್ವಲ್ಪ ಚೇತರಿಕೆ ಕಂಡು ಅಲ್ಲಲ್ಲಿ ಜಾತ್ರೆ ರಥೋತ್ಸವಗಳು ಆರಂಭಗೊಂಡಿವೆ. ಯಾವುದೋ ಒಂದು ಕಾರಣವನ್ನು ಮುಂದಿಟ್ಟುಕೊಂಡು ನಮ್ಮನ್ನು ವ್ಯಾಪಾರ ಮಾಡದಂತೆ ತಡೆಯುತ್ತಿದ್ದಾರೆ ಇದರಿಂದ ನಮಗೆ ಸಮಸ್ಯೆಯಾಗುತ್ತಿದೆ. ನಮಗೆ ಕೂಡ ಹಿಂದಿನಂತೆಯೇ ವ್ಯಾಪಾರ ಮಾಡಲು ಅವಕಾಶ ನೀಡುವಂತೆ ಈಗಾಗಲೇ ದೇವಸ್ಥಾನದ ಸಮಿತಿಯಲ್ಲಿ ಕೇಳಿಕೊಂಡಿದ್ದು ಸಕಾರಾತ್ಮಕವಾಗಿ ಸ್ಪಂದಿಸುವರೆಂಬ ನಂಬಿಕೆ ಇದೆ ಎಂದರು.

ಸುದ್ದಿಗೋಷ್ಠಿಯಲ್ಲಿ ತೌಫಿಕ್‌ ಮೊಹಮ್ಮದ್‌, ಇಬ್ರಾಹಿಂ, ಯಾಸೀನ್‌ ಕೆಮ್ಮಣ್ಣು, ಹಮೀದ್‌ ನೇಜಾರು ಉಪಸ್ಥಿತರಿದ್ದರು.

Latest Indian news

Popular Stories