ಮಲ್ಪೆಯಲ್ಲಿ ಮುಂದುವರಿಯಲಿದೆ ಸಾಹಸಕ್ರೀಡೆ

ಬೆಂಗಳೂರು: ಉಡುಪಿ ವಿಧಾನಸಭಾ ಕ್ಷೇತ್ರದ ಮಲ್ಪೆ ಅಭಿವೃದ್ಧಿ ಸಮಿತಿ ವತಿಯಿಂದ ಸಮುದ್ರದಲ್ಲಿ ಜಲಸಾಹಸ ಕ್ರೀಡೆಗಳ ಬಗ್ಗೆ ಈಗಾಗಲೇ ಟೆಂಡರ್ ಕರೆದು ಅನುಷ್ಠಾನಗೊಳಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಮರುಟೆಂಡರ್ ಕರೆಯಲು ಸಾಧ್ಯವಿಲ್ಲ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಸ್ಪಷ್ಟಪಡಿಸಿದರು.

ಬಿಜೆಪಿಯ ಯಶ್‌ಪಾಲ್ ಸುವರ್ಣ ಗಮನ ಸೆಳೆದು, ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ. ೫ ಕೋಟಿ ರೂ.ಗೂ ಅಧಿಕ ಆದಾಯ ತರಬಲ್ಲ ಸಾಹಸಕ್ರೀಡೆಯ ಟೆಂಡರ್‌ನ್ನು ಏಕಪಕ್ಷೀಯವಾಗಿ ನೀಡಿದ್ದು, ಸಾಹಸಕ್ರೀಡೆ ನಡೆಸುವ ಸಾಮರ್ಥ್ಯವು ಟೆಂಡರ್ ಪಡೆದ ಸಂಸ್ಥೆಗಿಲ್ಲ. ಏನಾದರೂ ಅನಾಹುತ ಆದರೆ ಸರ್ಕಾರಕ್ಕೆ ಕಪ್ಪು ಚುಕ್ಕೆ ಆಗಲಿದೆ ಎಂದು ಎಚ್ಚರಿಸಿದರಲ್ಲದೆ, ಪೌರ ಆಯುಕ್ತರು ಸಾಕಷ್ಟು ಅಕ್ರಮಕ್ಕೆ ದಾರಿ ಮಾಡಿಕೊಟ್ಟಿದ್ದು, ಅವರೀಗ ನಿವೃತ್ತಿಯ ಅಂಚಿನಲ್ಲಿದ್ದಾರೆ. ತಕ್ಷಣ ತನಿಖೆ ನಡೆಸಬೇಕು. ಮರುಟೆಂಡರ್ ಮಾಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಸಚಿವ ಮಂಕಾಳ ವೈದ್ಯ ಪರವಾಗಿ ಉತ್ತರಿಸಿದ ಬೈರತಿ ಸುರೇಶ್, ಮಲ್ಪೆ ಬೀಚ್‌ನಲ್ಲಿ ಸಾಹಸಕ್ರೀಡೆ ನಡೆಸಲು ಈ ಹಿಂದೆ ಟೆಂಡರ್ ಕರೆದು ರಾಜ್ಯದ ಪ್ರಮುಖ ದಿನಪತ್ರಿಕೆಗಳಲ್ಲೂ ಅಧಿಸೂಚನೆಯ ಜಾಹೀರಾತು ನೀಡಲಾಗಿತ್ತು. ಆದರೆ, ಅನೇಕರು ಟೆಂಡರ್‌ನಲ್ಲಿ ಭಾಗವಹಿಸಲು ಸಮಯಾವಕಾಶ ಕೇಳಿದ್ದರಿಂದ ಟೆಂಡರ್ ಪ್ರಕ್ರಿಯಯನ್ನು ೭ ದಿನ ಮುಂದೂಡಲಾಗಿತ್ತು. ಅದರಲ್ಲಿ ಭಾಗವಹಿಸಿದ್ದ ಹರಿಕಾಂತ್ ವೆಂಕಟೇಶ್ ಮತ್ತು ಸನತ್ ಸಾಲಿಯಾ ಅವರ ಪೈಕಿ ಹರಿಕಾಂತ್ ವೆಂಕಟೇಶ್ ಅವರಿಗೆ ಟೆಂಡರ್ ಆಗಿದ್ದು, ಮರು ಟೆಂಡರ್ ಕರೆಯಲೂ ಸಾಧ್ಯವಿಲ್ಲ. ಅಗತ್ಯ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ನಡೆಯುತ್ತಿರುವ ಸಾಹಸಕ್ರೀಡೆಯನ್ನು ಕೂಡ ನಿಲ್ಲಿಸಲಾಗುವುದಿಲ್ಲ. ಇದರಿಂದ ಒಂದುವರೆ ಪಟ್ಟು ಆದಾಯವೂ ಸರ್ಕಾರಕ್ಕೆ ಬರುತ್ತಿದೆ ಎಂದು ಅವರು ತಿಳಿಸಿದರು.

Latest Indian news

Popular Stories