ಬೈಂದೂರು: ಜಿಲ್ಲಾಡಳಿತ ಶಾಸಕರ ಸಂವಿಧಾನಿಕ ಹಕ್ಕುಗಳನ್ನು ಹತ್ತಿಕ್ಕುತ್ತಿದೆ.ಅಧಿಕಾರಿಗಳಿಗೆ ಶಾಸಕರ ಸಭೆಗೆ ತೆರಳಬಾರದೆಂದು ಶಾಸಕರ ಹಕ್ಕುಗಳನ್ನು ಕಸಿಯುತ್ತಿದ್ದಾರೆ.ಕಾಂಗ್ರೆಸ್ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಬೈಂದೂರು ತಾಲೂಕು ಆಡಳಿತ ಸೌಧದ ಎದುರುಗಡೆ ಶಾಸಕ ಗುರುರಾಜ್ ಗಂಟಿಹೊಳೆ ನಡೆಸುತ್ತಿದ್ದ ಧರಣಿ ಮಂಗಳವಾರ ಬೆಳಿಗ್ಗೆ ಅಂತ್ಯಗೊಳಿಸಿದ್ದಾರೆ.
ಸೋಮವಾರ ಸಂಜೆಯಿಂದ ಕಾರ್ಯಕರ್ತರೊಂದಿಗೆ ಧರಣಿ ಆರಂಭಿಸಿದ ಬಳಿಕ ತಹಶೀಲ್ದಾರರು,ಸಹಾಯಕ ಕಮಿಷನರ್ ಶಾಸಕರ ಮನ ಒಲಿಸುವ ಪ್ರಯತ್ನ ಮಾಡಿದರು ಕೂಡ ಪ್ರಯೋಜನವಾಗಿಲ್ಲ. ಮಾತ್ರವಲ್ಲದೆ ಜಿಲ್ಲಾ ಬಿಜೆಪಿ ಮುಖಂಡರು ಕಾಪು,ಉಡುಪಿ,ಕುಂದಾಪುರ ಶಾಸಕರು ಕೂಡ ಆಗಮಿಸಿ ಬೆಂಬಲ ನೀಡಿದ್ದರು.
ಮಂಗಳವಾರ ಬೆಳಿಗ್ಗೆ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿಗಳ ಜೊತೆ ಉಡುಪಿ -ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇತರ ಮುಖಂಡರು ಮಾತುಕತೆ ನಡೆಸಿದರು.ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಜಿಲ್ಲಾಡಳಿತದಿಂದ ಶಾಸಕರ ಹಕ್ಕುಚ್ಯುತಿ ಆಗಿಲ್ಲ.ಸಾಂವಿಧಾನಿಕ ನಿಯಮಗಳನ್ನು ಬಿಟ್ಟು ನಾವು ಕೆಲಸ ಮಾಡಲು ಸಾಧ್ಯವಿಲ್ಲ. ಶಾಸಕರ ಖಾಸಗಿ ಕಛೇರಿಯಲ್ಲಿ ಅಧಿಕೃತ ಸಭೆಗೆ ಸರಕಾರದ ನಿಯಮದಲ್ಲಿ ಅವಕಾಶವಿಲ್ಲ. ಶಾಸಕರು ಅಧಿಕಾರಿಗಳ ಸಭೆ ಮಾಡಬಾರದೆಂದು ನಾವು ಹೇಳಿಲ್ಲ.ಬದಲಾಗಿ ಸರಕಾರಿ ಕಛೇರಿ,ಶಾಸಕರ ಭವನದಲ್ಲಿ ನಡೆಯುವ ಅಧಿಕೃತ ಸಭೆಯಲ್ಲಿ ಮಾತ್ರ ಭಾಗವಹಿಸಲು ತಿಳಿಸಿದ್ದೇವೆ.
ಬೈಂದೂರು ಶಾಸಕರ ಮನವಿಯನ್ನು ಸರಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.ಸರಕಾರದ ಸ್ಪಷ್ಟನೆ ಬಂದ ಬಳಿಕ ಮಾಹಿತಿ ನೀಡುವುದಾಗಿ ತಿಳಿಸಿದರು. ಮಂಗಳವಾರ ಬೆಳಿಗ್ಗೆಯಿಂದ ಶಾಸಕರು ನಡೆಸುತ್ತಿರುವ ಅಹೋರಾತ್ರಿ ಧರಣಿ ಯನ್ನು ಕೈಬಿಡಲಾಯಿತು.
ಬೈಂದೂರಿನ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಯವರು ಬೈಂದೂರಿನ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ.ಹಿಂಬಾಗಿಲಿನ ಅಧಿಕಾರ ಶೋಭೆಯಲ್ಲ.ಪಶು ವೈದ್ಯರು ಸೇರಿದಂತೆ ಉತ್ತಮ ಅಧಿಕಾರಿಗಳ ವರ್ಗಾವಣೆ ಮೂಲಕ ಮಾಜಿ ಶಾಸಕರ ನೇತ್ರತ್ವದಲ್ಲಿ ಕಾಂಗ್ರೆಸ್ ತಂಡ ವರ್ಗಾವಣೆ ದಂಧೆಯಲ್ಲಿ ಹಣ ಮಾಡುತ್ತಿದ್ದಾರೆ. ಜನರು ಆರಿಸಿ ಕಳುಹಿಸಿದ ಶಾಸಕ ನಾನು.ಇಂತಹ ಯಾವುದೇ ದಬ್ಟಾಳಿಕೆಗೆ ಬಗ್ಗುವುದಿಲ್ಲ ಮತ್ತು ಶಾಸಕರ ಅಧಿಕಾರ ನನಗೆ ತಿಳಿಸುವ ಅಗತ್ಯವಿಲ್ಲ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.ಈ ಸಂದರ್ಭದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ,ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್,ರಾಜೇಶ ಕಾವೇರಿ, ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಸುರೇಶ ಶೆಟ್ಟಿ,ಮಹೇಂದ್ರ ಪೂಜಾರಿ,ಜಿ.ಪಂ ಮಾಜಿ ಸದಸ್ಯ ಸುರೇಶ ಬಟ್ವಾಡಿ, ಹಾಗೂ ಬಿಜೆಪಿ ಮುಖಂಡರು ಹಾಜರಿದ್ದರು.