ಉಡುಪಿ, ಸೆ.16: ಪ್ರವಾದಿ ಮುಹಮ್ಮದ್ ಪೈಗಂಬರ್ರವರ ಜನ್ಮ ದಿನಾಚರಣೆ ಈದ್ ಮಿಲಾದ್ನ್ನು ಸೋಮವಾರ ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಕಾಪು ಪೊಲಿಪು, ಉಚ್ಚಿಲ, ಮೂಳೂರು, ಪಡುಬಿದ್ರೆ, ಕಾರ್ಕಳ, ಶಿರ್ವ, ಕಟಪಾಡಿ, ನೇಜಾರು, ದೊಡ್ಡಣಗುಡ್ಡೆ, ಕುಂದಾಪುರಗಳಲ್ಲಿ ಈದ್ ಮಿಲಾದ್ನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಆಯಾ ಮಸೀದಿಗಳಿಂದ ಹೊರಟ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಾಗಿ ವಾಪಾಸ್ಸು ಮಸೀದಿಗಳಿಗೆ ಆಗಮಿಸುವ ಮೂಲಕ ಸಮಾಪ್ತಿಗೊಂಡಿತು. ಮೆರವಣಿಗೆಯಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರ ಸಂದೇಶ, ದಫ್ ಕುಣಿತ, ಸ್ಕೌಟ್ ಹಾಗೂ ಮದ್ರಸದ ಮಕ್ಕಳು ಸಾಗಿಬಂದರು.
ಕಾಪು ಪೊಲಿಪು ಜುಮಾ ಮಸೀದಿಯಿಂದ ಹೊರಟ ಮೆರವಣಿಗೆಯು ಕೊಪ್ಪಲಂಗಡಿಯವರೆಗೆ ಸಾಗಿ, ಬಳಿಕ ಇತರ ಮಸೀದಿಗಳಿಂದ ಆಗಮಿಸಿದ ಮೆರವಣಿಗೆ ಜೊತೆ ವಾಪಾಸ್ಸು ಪೊಲಿಪು ಮಸೀದಿಗೆ ಆಗಮಿಸಿ ಸಮಾಪ್ತಿ ಗೊಂಡಿತು. ಮೆರವಣಿಗೆಯಲ್ಲಿ ಆಲಂಕೃತ ವಾಹನಗಳಲ್ಲಿ ದಫ್ ಕುಣಿತ, ಮದ್ರಸ ಮಕ್ಕಳು ಗಮನ ಸೆಳೆದರು.ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು