ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಬೆಂಗಳೂರು ಸಿಸಿಬಿ ಪೊಲೀಸರಿಂದ ಉಡುಪಿಯಲ್ಲಿ ವಿವಿಧ ಹಂತಗಳಲ್ಲಿ ತನಿಖೆ

ಉಡುಪಿ,: ಚೈತ್ರಾ ಕುಂದಾಪುರ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಸಿಸಿಬಿ ಪೊಲೀಸರು ಉಡುಪಿಯಲ್ಲಿ ವಿವಿಧ ಹಂತಗಳಲ್ಲಿ ತನಿಖೆಯನ್ನು ನಡೆಸುತ್ತಿದ್ದು ಸೊಸೈಟಿ ಖಾತೆಗಳನ್ನು ಪರಿಶೀಲನೆ ನಡೆಸಿದ್ದಾರೆ.

ಸಿಸಿಬಿ ತಂಡ ಶನಿವಾರ ಉಪ್ಪೂರಿನಲ್ಲಿರುವ ಕೋ-ಆಪರೇಟಿವ್ ಸೊಸೈಟಿಗೆ ಭೇಟಿ ನೀಡಿ ಈ ಪ್ರಕರಣಕ್ಕೆ ಸಂಬಂಧಿಸಿ ಹಣ ವರ್ಗಾವಣೆ ಹಾಗೂ ಆರೋಪಿಗಳು ಠೇವಣೆ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ ಎಂಬುದು ತಿಳಿದು ಬಂದಿದೆ. ಅಲ್ಲದೆ ಬೈಂದೂರು, ಕುಂದಾಪುರ ಹಾಗೂ ಉಡುಪಿ ತಾಲೂಕಿನ ವಿವಿಧೆಡೆ ಕಾರ್ಯಾಚರಣೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಉಪ್ಪೂರಿನ ಬ್ಯಾಂಕ್‌ನಲ್ಲಿ ಆರೋಪಿ ಶ್ರೀಕಾಂತ್ ನಾಯಕ್ ಹೆಸರಿನಲ್ಲಿ ಚೈತ್ರಾ ಕುಂದಾಪುರ ಅಪಾರ ಪ್ರಮಾಣದ ನಗದು, ನಿವೇಶನ ಪತ್ರ ಹಾಗೂ ಚಿನ್ನಾಭರಣಗಳನ್ನು ಇಟ್ಟಿರುವ ಬಗ್ಗೆ ಶಂಕೆ ಇದ್ದು, ಈ ನಿಟ್ಟಿನಲ್ಲಿ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಚೈತ್ರಾ ಕುಂದಾಪುರ ತನ್ನ ಗೆಳೆಯ ಶ್ರೀಕಾಂತ್ ನಾಯಕ್ ಹೆಸರಿನಲ್ಲಿ ಖರೀದಿಸಿದ ಜಾಗದಲ್ಲಿ ಹಿರಿಯಡ್ಕದ ಬಳಿ ಹೊಸ ಮನೆ ನಿರ್ಮಿಸುತ್ತಿರುವ ಅಂಶ ಕೂಡ ಬೆಳಕಿಗೆ ಬಂದಿದೆ. ವರ್ಷದ ಹಿಂದೆ ಖರೀದಿಸಿರುವ 20ರಿಂದ 25 ಸೆಂಟ್ಸ್ ಜಾಗದಲ್ಲಿ ಎರಡು ಅಂತಸ್ತಿನ ಮನೆ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ. ಸದ್ಯ ಚೈತ್ರಾ ಹಾಗೂ ಶ್ರೀಕಾಂತ್ ನಾಯಕ್ ಬಂಧನವಾಗುತ್ತಿದ್ದಂತೆ ಈ ಮನೆಯ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ ಎಂದು ತಿಳಿದುಬಂದಿದೆ.

Latest Indian news

Popular Stories