Udupi

ಉಡುಪಿ: ಸಿಎನ್’ಜಿ ಗ್ಯಾಸ್ ಕೊರತೆ | ಜಿಲ್ಲಾಧಿಕಾರಿಗೆ‌ ಮನವಿ

“ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ತಲೆದೋರಿರುವ ಸಿಎನ್’ಜಿ ಗ್ಯಾಸ್ ಕೊರತೆಯನ್ನು ಸರಿಪಡಿಸುವಂತೆ ಆಗ್ರಹಿಸಿ ಜಿಲ್ಲೆಯ ವಿವಿಧ ಆಟೋ ರಿಕ್ಷಾ ಸಂಘಟನೆಗಳು ಇಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಅವರಿಗೆ ಮನವಿ ಸಲ್ಲಿಸಿತು.

ಜಿಲ್ಲೆಯಲ್ಲಿ ಸಿಎನ್‌ಜಿ ಪೂರೈಕೆಯಲ್ಲಿ ತೀವ್ರ ಕೊರತೆ ಉಂಟಾಗಿದ್ದು, ಇದರಿಂದ ಆಟೊ ಚಾಲಕ/ಮಾಲಕರು ಹೈರಾಣಾಗಿ ದ್ದಾರೆ. ಜಿಲ್ಲೆಯಲ್ಲಿ 5000ಕ್ಕೂ ಅಧಿಕ ಸಿಎನ್‌ಜಿ ಅಟೋ ರಿಕ್ಷಾಗಳಿದ್ದು ಇಡೀ ಜಿಲ್ಲೆಯಲ್ಲಿ ಕೇವಲ 4 ಪೂರೈಕೆ ಕೇಂದ್ರಗಳಿವೆ. ಈ ಎಲ್ಲ ಕೇಂದ್ರಗಳಲ್ಲಿ ಗ್ಯಾಸ್ ಪೂರೈಕೆಯನ್ನು ಕಡಿತ ಮಾಡಲಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಉಡುಪಿ ತಾಲೂಕಿನಲ್ಲಿ 1500ಕ್ಕೂ ಅಧಿಕ ರಿಕ್ಷಾಗಳಿವೆ. ಉಡುಪಿ ತಾಲೂಕಿನ ಗುಂಡಿ ಬೈಲ್, ಮಲ್ಪೆ, ಬ್ರಹ್ಮಾವರಗಳಲ್ಲಿ ಒಟ್ಟು ಮೂರು ಸಿಎನ್‌ಜಿ ಪಂಪ್ ಇದ್ದು, ಅದರಲ್ಲಿ ಒಂದು ಪಂಪ್‌ನಲ್ಲಿ ಮಾತ್ರ ಗ್ಯಾಸ್ ಪೂರೈಕೆ ಮಾಡಲಾಗುತ್ತಿದೆ. ಹಾಗಾಗಿ ರಿಕ್ಷಾ ಚಾಲಕರಿಗೆ ಗ್ಯಾಸ್ ಇಂಧನ ಸಿಗದೆ ಇರುವುದರಿಂದ ತುಂಬಾ ತೊಂದರೆ ಆಗುತ್ತಿದೆ ಎಂದು ನಿಯೋಗ ದೂರಿದೆ.

ರಿಕ್ಷಾ ಚಾಲಕರು ಗ್ಯಾಸ್ ತುಂಬಿಸಲು ರಾತ್ರಿ ಹಗಲು ಎನ್ನದೆ ಸುಮಾರು 3 ರಿಂದ 4 ಗಂಟೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ದಿನವಿಡೀ ದುಡಿಯುವ ರಿಕ್ಷಾ ಚಾಲಕರಿಗೆ ಬದುಕು ನಡೆಸಲು, ಬ್ಯಾಕ್ ಸಾಲ ಪಾವತಿಸಲು ತುಂಬಾ ಕಷ್ಟಕರ ಆಗಿದೆ. ಆದುದರಿಂದ ಕೂಡಲೇ ಈ ಕುರಿತು ಗಮನ ಹರಿಸಿ ಸಿಎನ್‌ಜಿ ಪೂರೈಕೆಗೆ ಕ್ರಮ ತೆಗೆದುಕೊಳ್ಳಬೇಕೆಂದು ನಿಯೋಗ ಜಿಲ್ಲಾಧಿಕಾರಿಯವರನ್ನು ಆಗ್ರಹಿಸಿದೆ.

ನಿಯೋಗದಲ್ಲಿ ಸಿಐಟಿಯುಗೆ ಸೇರಿದ ಆಟೊ ಸಂಘಟನೆಗಳ ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಉಡುಪಿ/ಬ್ರಹ್ಮಾವರ ತಾಲೂಕು ಆಟೊ ಚಾಲಕರ ಸಂಘದ ಗೌರವಾಧ್ಯಕ್ಷರಾದ ರಾಜು ಪೂಜಾರಿ, ಅಧ್ಯಕ್ಷ ರಾಜು ಸಾಲಿಯಾನ್, ಪ್ರಮುಖರಾದ ಅಶ್ರಫ್, ನಾಗೇಶ್, ಉಮೇಶ್ ಪೂಜಾರಿ, ಉದಯ ಪೂಜಾರಿ, ಸದಾಶಿವ ಶೆಟ್ಟಿ, ಯಶೋಧ ಆಟೋ ಯೂನಿಯನ್ ಜಿಲ್ಲಾಧ್ಯಕ್ಷ ಕೆ.ಕೃಷ್ಣಮೂರ್ತಿ ಆಚಾರ್ಯ, ಆಟೊ ಸಂಘಟನೆಗಳ ಮುಖಂಡ ದಿನೇಶ್ ಗಾಣಿಗ ಹಾಗೂ ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮುನಿಯಾಲ್ ಮೊದಲಾದವರು ಉಪಸ್ಥಿತರಿದ್ದರು.”

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button