ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ‘ಪ್ರತ್ಯೇಕ ರಾಷ್ಟ್ರ’ದ ಹೇಳಿಕೆಯಿಂದ ಕಾಂಗ್ರೆಸಿಗರದ್ದು ‘ಭಾರತ್ ತೋಡೋ ಯಾತ್ರೆ’ ಎಂಬುದು ಸಾಬೀತಾಗಿದೆ : ಕಿಶೋರ್ ಕುಮಾರ್ ಕುಂದಾಪುರ

ಭಾರತ್ ಜೋಡೋ ಎಂದು ಬೊಗಳೆ ಬಿಡುತ್ತಿರುವ ಕಾಂಗ್ರೆಸ್ಸಿನ ನೈಜ ವಿಭಜನಕಾರಿ ಮನಸ್ಥಿತಿ ಮಗದೊಮ್ಮೆ ಬಟ್ಟಾಬಯಲಾಗಿದೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ‘ಭಾರತ್ ಜೋಡೋ ಯಾತ್ರೆ’ ಎಂದು ಹೆಸರಿಟ್ಟುಕೊಂಡು ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂಬುದು ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಅವರ ‘ದಕ್ಷಿಣಕ್ಕೆ ಪ್ರತ್ಯೇಕ ರಾಷ್ಟ್ರ’ದ ಹೇಳಿಕೆಯಿಂದ ಸಾಬೀತಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ‘ಏಕ್ ಭಾರತ್ ಶ್ರೇಷ್ಠ ಭಾರತ್’ ಧ್ಯೇಯ ವಾಕ್ಯದಡಿ 2047ಕ್ಕೆ ವಿಕಸಿತ ಭಾರತ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಶ್ರಮಿಸುತ್ತಿರುವ ಅಮೃತ ಕಾಲಘಟ್ಟದಲ್ಲಿ ಕಾಂಗ್ರೆಸ್ ನಾಯಕರ ದೇಶ ವಿರೋಧಿ ಹೇಳಿಕೆ ಅತ್ಯಂತ ಖಂಡನೀಯ.

ಸಂಸದ ಡಿ.ಕೆ. ಸುರೇಶ್ ಅವರ ಉದ್ದಟತನದ ಹೇಳಿಕೆಯ ಕುರಿತು ಪಕ್ಷದ ನಿಲುವೇನು ಎಂಬುದನ್ನು ಕಾಂಗ್ರೆಸ್ ಸಮಸ್ತ ಭಾರತೀಯರ ಮುಂದೆ ಸ್ಪಷ್ಟಪಡಿಸಬೇಕಾಗಿದೆ.

ದೇಶದ ಸಮಗ್ರತೆ, ಅಖಂಡತೆ ಮತ್ತು ಸಾರ್ವಭೌಮತೆಗೆ ದಕ್ಕೆ ತರುವಂತಹ ಯಾವುದೇ ಹೇಳಿಕೆಗಳನ್ನು ದೇಶಭಕ್ತ ದೇಶವಾಸಿಗಳು ಸಹಿಸಲಾರರು. ಜಾತಿ, ಧರ್ಮಗಳ ಮಧ್ಯೆ ಒಡಕು ಸೃಷ್ಟಿಸಿ ಕೇವಲ ಅಧಿಕಾರಕ್ಕಾಗಿ ಹೆಣಗಾಡುವ ಕಾಂಗ್ರೆಸ್ಸಿನಿಂದ ಮಾತ್ರವೇ ಇಂತಹ ಹೇಳಿಕೆಗಳನ್ನು ನಿರೀಕ್ಷಿಸಲು ಸಾಧ್ಯ. ಕಾಂಗ್ರೆಸ್ಸಿನ ಯಾವುದೇ ದೇಶ ವಿರೋಧಿ ಕುಕೃತ್ಯಗಳು ಎಂದೂ ಕಾರ್ಯಗತವಾಗಲಾರದು ಎಂದು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories