ಉಡುಪಿ | ಪ್ರವಾದಿ ಮುಹಮ್ಮದರ ಚಿಂತನೆಗಳು ಸಾರ್ವಕಾಲಿಕ ವಾದುದು – ಸಂತೋಷ್ ಕುಮಾರ್ ಶೆಟ್ಟಿ

ಉಡುಪಿ, ಸೆ.29: ಪ್ರವಾದಿ ಮುಹಮ್ಮದರ ಚಿಂತನೆಗಳು ಸಾರ್ವಕಾಲಿಕ ವಾದುದು. ಈದ್ ಮಿಲಾದ್ ಕಾರ್ಯಕ್ರಮಗಳು ಪ್ರವಾದಿ ಚಿಂತನೆಯನ್ನು ಸರ್ವರೂ ಅರಿಯುವ ಮತ್ತು ಅರಿಯಿಸುವ ವೇದಿಕೆಗಳಾಗಬೇಕು ಎಂದು ಉಡುಪಿ ಜಿಲ್ಲಾ ಟೀಚರ್ಸ್‌ ಬ್ಯಾಂಕಿನ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಚೋನಾಳಿ ಹೇಳಿದ್ದಾರೆ.

ಹೆನ್ನಾಬೈಲ್ ಮಸೀದಿಯಲ್ಲಿ ನಡೆದ ಪ್ರವಾದಿ ಮುಹಮ್ಮದ್ ಪೈಗಂಬರ್ ರವರ 1495 ಜನ್ಮದಿನಾಚರಣೆ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತಿದ್ದರು. ಹಿಂದೂ ಮುಸ್ಲಿಮರು ಒಂದಾಗಿ ಬದುಕಿದಾಗಲೇ ದೇಶ ತಲುಪಬೇಕಾದ ಎತ್ತರವನ್ನು ತಲುಪುತ್ತದೆ. ವಿಶ್ವದ ಅತ್ಯಂತ ದೊಡ್ಡ ಸಮುದಾಯಗಳು ಎಲ್ಲ ಭಿನ್ನತೆಗಳನ್ನು ಮರೆತು ಒಂದಾಗುವುದು ಅಸಾಧ್ಯವೇನಲ್ಲ. ಆದರೆ ಅದಕ್ಕೆ ಪ್ರಬುದ್ಧ ಚಿಂತಕರ ಸಮೂಹ ಬೇಕಾಗಿದೆ ಎಂದರು.
ಪ್ರವಾದಿ ಮುಹಮ್ಮದರು ಸೇರಿದಂತೆ ಎಲ್ಲ ಕಾಲದಲ್ಲೂ ಬಂದ ದೇವ ದೂತರು, ದಾರ್ಶನಿಕರು, ಋಷಿ ಮುನಿಗಳ ಬದುಕು ಮತ್ತು ಸಂದೇಶಗಳ ಅಧ್ಯಯನ ನಿಷ್ಪಕ್ಷಪಾತವಾಗಿ ನಡೆಯಬೇಕು. ಆಗ ಮಾತ್ರ ಸಮಾಜ ಪ್ರಬುದ್ಧ ವಾಗಿ ಉನ್ನತ ಚಿಂತನೆ ಮೂಡಿ ಸಾಮಾಜಿಕ ಸೌಹಾರ್ದ ನೆಲೆಯಾಗುತ್ತದೆ. ಸೌಹಾರ್ದತೆಯ ತುಡಿತ ಕಾಲದ ಅಗತ್ಯ ಎಂದು ಅವರು ತಿಳಿಸಿದರು.

ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಇದರ ಮುಖ್ಯ ಸಲಹೆಗಾರ ಇಬ್ರಾಹಿಂ ಸಾಹೇಬ್ ಕೋಟ, ಶ್ರೀಕ್ಷೇತ್ರ ಕಮಲಶಿಲೆ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಶೇಖರ್ ಶೆಟ್ಟಿ ಹೆನ್ನಾಬೈಲ್ ಅತಿಥಿಗಳಾಗಿದ್ದರು. ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷ ಹಸನ್ ಸಾಹೇಬ್, ಮಿಲಾದ್ ಕಮಿಟಿ ಅಧ್ಯಕ್ಷ ಸೈಯದ್ ರಫಿಕ್, ಕಾರ್ಯದರ್ಶಿ ಆಸೀಫ್ ಸಾಹೇಬ್ ಉಪಸ್ಥಿತರಿದ್ದರು. ತೌಸೀಫ್ ಇಬ್ರಾಹಿಮ್ ಸ್ವಾಗತಿಸಿದರು. ಮುಷ್ತಾಕ್ ಹೆನ್ನಾಬೈಲ್ ಕಾರ್ಯಕ್ರಮ ನಿರೂಪಿಸಿದರು

Latest Indian news

Popular Stories