ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ – ಜಯಪ್ರಕಾಶ್ ಹೆಗ್ಡೆ

ಕಾಪು: ಉಡುಪಿ ಜಿಲ್ಲೆಯಾಗಿ ರಚನೆಯಾದ ಕಾರಣರಿಂದ ಇಂದು ಏಳು ತಾಲೂಕುಗಳ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಪೂರಕ ವಾತಾವರಣವಿದೆ. ಕರಾವಳಿ ಜನರ ಸಮಸ್ಯೆಗಳನ್ನು ಹತ್ತಿರದಿಂದ ಗಮನಿಸಿದ್ದೇನೆ ಮತ್ತು ಅವಕಾಶ ಸಿಕ್ಕಾಗಲೆಲ್ಲ ಜಿಲ್ಲೆಗಾಗಿ, ಜಿಲ್ಲೆಯ ಜನತೆಗಾಗಿ ಕೆಲಸ ಮಾಡಿದ್ದೇನೆ. ಕರಾವಳಿ ಮತ್ತು ಮಲೆನಾಡಿನ ಮೀನುಗಾರರು, ಕೃಷಿಕರು, ಹಿಂದುಳಿದ ವರ್ಗಗಳ ಜನತೆಯ ಆಶೋತ್ತರಗಳಿಗೆ ಸ್ಪಂದಿಸುತ್ತಾ ಬಂದಿದ್ದು ಮುಂದೆಯೂ ಜನರಿಗಾಗಿ ದುಡಿಯುವಷ್ಟು ಸಾಮರ್ಥಯವನ್ನು ಹೊಂದಿದ್ದೇನೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ. ಜಯಪ್ರಕಾಶ್‌ ಹೆಗ್ಡೆ ಹೇಳಿದರು.

ಚುನಾವಣೆ ಪ್ರಯುಕ್ತ ಮಂಗಳವಾರ ಕಾಂಗ್ರೆಸ್‌ ಬ್ಲಾಕ್‌ ಕಾಂಗ್ರೆಸ್‌ ನೇತೃತ್ವದಲ್ಲಿ ಪಡುಬಿದ್ರಿಯಿಂದ ಕಾಪುವಿನವರೆಗೆ ನಡೆದ ಬೃಹತ್‌ ರ್‍ಯಾಲಿ ಮತ್ತು ಕಾಪು ಪೇಟೆಯಲ್ಲಿ ಜರಗಿದ ಚುನಾವಣ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಬಿಜೆಪಿಯವರಿಗೆ ತಮ್ಮ ವೈಯಕ್ತಿಕ ಸಾಧನೆ ಮತ್ತು ಸಾಮರ್ಥ್ಯವನ್ನು ತಿಳಿಸಿ, ಮತ ಕೇಳುವ ನೈತಿಕತೆಯಿಲ್ಲ. ಹಾಗಾಗಿ ಅವರು ರಾಷ್ಟ್ರೀಯ ಹಿತ, ನಾಯಕರ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಕಾಂಗ್ರೆಸ್‌ಗೆ ಮತ ನೀಡುವ ಮೂಲಕ ನನ್ನನ್ನು ಆಯ್ಕೆ ಮಾಡಿದಲ್ಲಿ ಕ್ಷೇತ್ರದ ಜನತೆಯ ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಬಹುಮತದ ಗೆಲುವು
ಕಳೆದ ಬಾರಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಪುವಿಗೆ ಬಂದಾಗ ಕರಾವಳಿಯ ಜನತೆಗೆ ಕುಚ್ಚಲಕ್ಕಿ ನೀಡುವುದಾಗಿ ಕೋಟ ಶ್ರೀನಿವಾಸ ಪೂಜಾರಿ ಅವರು ನೀಡಿದ್ದ ಭರವಸೆ ಇನ್ನೂ ಈಡೇರಿಲ್ಲ. ತಾವು ಜನತೆಗೆ ಕೊಟ್ಟ ಭರವಸೆಗಳನ್ನು ಈಡೇರಿಸಲಾಗದವರು ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳಿಗೆ ಬಗ್ಗೆ ವಿರೋಧ ಮಾಡುತ್ತಿದ್ದಾರೆ. ಈ ಬಾರಿ ಜಯಪ್ರಕಾಶ್‌ ಹೆಗ್ಡೆ ಅವರು ಪ್ರಚಂಡ ಬಹುಮತದಿಂದ ಗೆದ್ದು ಬರುತ್ತಾರೆ ಎಂದರು.
ಮಾಜಿ ಸಂಸದೆ ತೇಜಸ್ವಿನಿ ಗೌಡ ಮಾತನಾಡಿ, ಜಯಪ್ರಕಾಶ್‌ ಹೆಗ್ಡೆ ಅವರಿಗೆ ಆದರ್ಶ ಸಂಸದರಾಗುವ ಯೋಗ ಮತ್ತು ಯೋಗ್ಯತೆ ಎರಡೂ ಇದೆ. ಹಾಗಾಗಿ ಅವರ ಗೆಲುವು ಶತಃಸಿದ್ಧವಾಗಿದೆ ಎಂದರು.

ಸಂಸದರಾಗಿ ಶೋಭಾ ಕರಂದ್ಲಾಜೆ ಅವರು ತಮ್ಮ 10 ವರ್ಷಗಳ ಆಡಳಿತದಲ್ಲಿ ಏನು ಕೊಟ್ಟಿದ್ದಾರೆ, ಕೇಂದ್ರದಲ್ಲಿ 10 ವರ್ಷ ಆಡಳಿತದಲ್ಲಿದ್ದ ಬಿಜೆಪಿ ಸರಕಾರ ಕರಾವಳಿಗೆ ಏನು ಕೊಟ್ಟಿದೆ ಎನ್ನುವುದನ್ನು ಪರಾಮರ್ಷಿಸಿಕೊಂಡು, ಮತ ನೀಡುವ ಅವಕಾಶ ಮತದಾರ ಮುಂದಿದೆ ಎಂದು ಕೆಪಿಸಿಸಿ ಮುಖಂಡ ಸುಧೀರ್‌ ಕುಮಾರ್‌ ಮುರೊಳ್ಳಿ ಹೇಳಿದರು.

ಕೆಪಿಸಿಸಿ ಉಪಾಧ್ಯಕ್ಷ ಎಂ. ಎ. ಗಫೂರ್‌, ಎಐಸಿಸಿ ಕಾರ್ಯದರ್ಶಿ ಸಂದೀಪ್‌, ರಾಜ್ಯ ಮೀನುಗಾರ ಪ್ರಕೋಷ್ಠದ ಅಧ್ಯಕ್ಷ ಮಂಜುನಾತ್‌ ಸುಣೇಗಾರ್‌, ಕೆಪಿಸಿಸಿ ಸಂಯೋಜಕ ನವೀನ್‌ಚಂದ್ರ ಶೆಟ್ಟಿ, ಧರ್ಮಗುರು ಫಾ| ವಿಲಿಯಂ ಮಾರ್ಟಿಸ್‌, ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಮಹಿಳಾ ಕಾಂಗ್ರೆಸ್‌ ಜಿಲ್ಲಾಧ್ಯಕ್ಷೆ ಗೀತಾ ವಾಗ್ಲೆ, ಕಾಂಗ್ರೆಸ್‌ ಅಲ್ಪಸಂಖ್ಯಾಕ‌ರ ಘಟಕದ ಜಿಲ್ಲಾಧ್ಯಕ್ಷ ಶಫುìದ್ದೀನ್‌ ಶೇಖ್‌, ಕಾಪು ಬ್ಲಾಕ್‌ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಶಾಂತಲತಾ ಶೆಟ್ಟಿ, ಪಕ್ಷದ ಮುಖಂಡರಾದ ಅಮƒತ್‌ ಶೆಣೆ„, ಹರೀಶ್‌ ಕಿಣಿ ಉಪಸ್ಥಿತರಿದ್ದರು.

ಕಾಪು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ ಸ್ವಾಗತಿಸಿದರು. ಕಾಪು ಬ್ಲಾಕ್‌ ಪ್ರಚಾರ ಸಮಿತಿ ಅಧ್ಯಕ್ಷ ಜೀತೇಂದ್ರ ಪುರ್ಟಾಡೋ ನಿರೂಪಿಸಿ, ವಂದಿಸಿದರು.

ಚುನಾವಣ ವೆಚ್ಚಕ್ಕಾಗಿ ದೇಣಿಗೆ ನೀಡಿದ ವಿದ್ಯಾರ್ಥಿನಿ

ವಿದ್ಯಾರ್ಥಿನಿಯೋರ್ವಳು ಕೆ. ಜಯ ಪ್ರಕಾಶ್‌ ಹೆಗ್ಡೆ ಅವರಿಗೆ ಚುನಾವಣ ವೆಚ್ಚಕ್ಕಾಗಿ ದೇಣಿಗೆಯನ್ನು ನೀಡಿ, ಬೆಂಬಲ ಘೋಷಿಸಿದ್ದು ಸಭೆಯ ವಿಶೇಷತೆಯಾಗಿತ್ತು. ಇದನ್ನು ಭಾಷಣದಲ್ಲಿ ಉಲ್ಲೇಖೀಸಿದ ಜೆ. ಪಿ. ಹೆಗ್ಡೆ ಅವರು, ಮುಂದಿನ ದಿನಗಳಲ್ಲಿ ಈ ಋಣವನ್ನು ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಕಾಪು ಪೇಟೆಯಲ್ಲಿ ನಡೆದ ಸಭೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.

ಆಗ ಇಲ್ಲದ ಜಾತಿ ಸಮೀಕರಣ ಈಗ ಹೇಗೆ ನೆನಪಾಯಿತು?: ವಿನಯಕುಮಾರ್‌ ಸೊರಕೆ

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್‌ ಸೊರಕೆ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಮತ್ತು ಅಭ್ಯರ್ಥಿಗಳ ಬಗ್ಗೆ ದೇಶದ್ರೋಹಿ ಹೇಳಿಕೆ ಮೂಲಕ ಅಪಪ್ರಚಾರ ಮಾಡಿ ಕಾಂಗ್ರೆಸ್‌ ಸೋಲಿಗೆ ಕಾರಣರಾದ, ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಕೇಂದ್ರ ಸರಕಾರ ಗಣರಾಜ್ಯೋತ್ಸವ ಮೆರವಣಿಗೆಗೆ ತಿರಸ್ಕರಿಸಿ ಅವಮಾನಿಸಿದಾಗ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ನಾರಾಯಣ ಗುರುಗಳ ಸಂದೇಶವನ್ನು ಪಠ್ಯ ಪುಸ್ತಕದಿಂದ ಕಿತ್ತು ಹಾಕಿದಾಗ ಜಾತಿ ಸಮೀಕರಣವನ್ನು ಮರೆತಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಈಗ ತಮ್ಮ ಚುನಾವಣ ಸಂದರ್ಭ ಹೇಗೆ ಬಂತು ಜಾತಿಯ ನೆನಪು ಎಂದು ಪ್ರಶ್ನಿಸಿದರು.

Latest Indian news

Popular Stories