ಗದ್ದರ್ ಹಾಡುಗಳು ಹೋರಾಟಕ್ಕೆ ಆಕ್ಸಿಜನ್:ಜಯನ್ ಮಲ್ಪೆ


ಉಡುಪಿ: ಶೋಷಿತ ಸಮುದಾಯದ ಹೋರಾಟಕ್ಕೆ ಗದ್ದರ್ ಹಾಡುಗಳು ಶಕ್ತಿ,ಚೈತನ್ಯವನ್ನು ಉಂಟುಮಾಡುವ ಸಾಂಸ್ಕೃತಿಕ ಆಕ್ಸಿಜನ್ ಇದ್ದಂತೆ ಎಂದು ಜನಪರ ಹೋರಾಟಗಾರ ಹಾಗು ದಲಿತ ಚಿಂತಕ ಜಯನ್ ಮಲ್ಪೆ ಹೇಳಿದ್ದಾರೆ.


ಅವರು ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ ಗದ್ದರ್ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ,
ಬಡವರ ನೋವುಗಳಿಗೆ ಹೃದಯಾಂತರಾಳದ ಆಕ್ರಂದನಗಳಿಗೆ ಹಾಡುಗಳ ಮೂಲಕ ಧ್ವನಿಯಾದ ಗದ್ದರ್, ಮಾರ್ಕ್ಸ್‌ವಾದ ಮತ್ತು ಅಂಬೇಡ್ಕರ್‌ವಾದಗಳ ಸಿದ್ಧಾಂತವನ್ನು ಜನಸಾಮಾನ್ಯರಿಗೆ ತಲುಪಿಸಿದ ಕಂಚಿನ ಕಂಠದ ಸಮತಾ ರಾಜ್ಯದ ಕನಸುಹೊತ್ತ ಕೆಂಪು ಸೂರ್ಯ ಎಂದರು.


ಪ್ರಗತಿಪರ ಚಿಂತಕ ಸಂಜೀವ ಬಳ್ಕೂರ್ ಮಾತನಾಡಿ ಕೈಯಲ್ಲಿ ತಂಬೂರಿಹಿಡಿದು ರೈತರ ಮತ್ತು ದಲಿತರ ಹಕ್ಕುಗಳನ್ನು ಜಾನಪದ ಹಾಡುಗಳ ರೂಪದಲ್ಲಿ ಕ್ರಾಂತಿಯನ್ನು ಸೃಷ್ಟಿಸಿ,ಹೋರಾಟಗಾರರಿಗೆ ಸ್ಪೂರ್ತಿಯನ್ನು ನೀಡಿದ ಗದ್ದರ್ ತುಳಿತಕ್ಕೊಳಗಾದ ಜನರ ಕೊರಳ ಧ್ವನಿಯಾಗಿದ್ದವರು ಎಂದರು.


ಹಿರಿಯ ದಲಿತ ಮುಖಂಡ ಗಣೇಶ್ ನೆರ್ಗಿ,ಅಂಬೇಡ್ಕರ್ ಯುಸೇನೆಯ ಜಿಲ್ಲಧ್ಯಾಕ್ಷ ಹರೀಶ್ ಸಲ್ಯಾನ್,ಕಾರ್ಯದರ್ಶಿ ಸಂತೋಷ್ ಕಪ್ಪೆಟ್ಟು ನುಡಿನಮನ ಸಲ್ಲಿಸಿ ಮಾತನಾಡಿದರು.


ದಲಿತ ಯುವನಾಯಕರಾದ ಗುಣವಂತ ತೊಟ್ಟಂ,ಕೃಷ್ಣ ಶ್ರೀಯಾನ್ ಮಲ್ಪೆ,ಅನಿಲ್ ಕದ್ಕೆ,ಸರೇಶ್ ಚಿಟ್ಪಾಡಿ,ಬುದ್ಧ ಟ್ರಸ್ಟ್‌ನ ಸುಶೀಲ್ ಕುಮಾರ್,ಪ್ರಸಾದ್ ನೆರ್ಗಿ,ನವೀನ್ ಬನ್ನಂಜೆ ಮುಂತಾದವರು ಉಪಸ್ಥಿತರಿದ್ದರು.


ದಯಾನಂದ ಕಪ್ಪೆಟ್ಟು ಸ್ವಾಗತಿಸಿ,ಭಗವಾನ್ ಮಲ್ಪೆ ವಂದಿಸಿದರು.ದಿನೇಶ್ ಜವನೆರಕಟ್ಟೆ ಕಾರ್ಯಕ್ರಮ ನಿರೂಪಿಸಿದರು

Latest Indian news

Popular Stories