ಉಡುಪಿ: ಕೊರಗ ಸಮುದಾಯದ ಅಹವಾಲು ಸ್ವೀಕರಿಸಿದ ಸ್ಪೀಕರ್ ಯುಟಿ‌ ಖಾದರ್

ಉಡುಪಿ: ಕೊರಗ ಸಮುದಾಯದ ಯುವಜನತೆಗೆ ಸರಕಾರಿ ಉದ್ಯೋಗದಲ್ಲಿ ನೇರ ನೇಮಕಾತಿ ಹಾಗೂ ಕೃಷಿಭೂಮಿ ಹಕ್ಕುಪತ್ರ ಮಂಜೂರಾತಿಗೆ ಆಗ್ರಹಿಸಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಕಳೆದ 10 ದಿನಗಳಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹವು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಅವರ ಭರವಸೆ ಹಿನ್ನೆಲೆಯಲ್ಲಿ ಬುಧವಾರ ಅಂತ್ಯಗೊಳಿಸಲಾಯಿತು.

ಧರಣಿ ಸ್ಥಳಕ್ಕೆ ಭೇಟಿ ನೀಡಿದ ಸ್ಪೀಕರ್, ಧರಣಿನಿರತರಿಂದ ಅಹವಾಲು ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ಕೊರಗ ಸಮುದಾಯದ ಯುವಜನತೆಗೆ ಸರಕಾರಿ ಉದ್ಯೋಗ ಹಾಗೂ ಕೃಷಿಭೂಮಿ ನೀಡಬೇಕೆಂಬ ಬೇಡಿಕೆಗಳ ಕುರಿತು ಆ.15ರ ಬಳಿಕ ಬೆಂಗಳೂರಿನಲ್ಲಿ ಸಂಬಂಧಪಟ್ಟ ಸಚಿವರು, ಅಧಿಕಾರಿಗಳ ಉನ್ನತ ಮಟ್ಟದ ಸಭೆ ಕರೆದು ಚರ್ಚಿಸಿ, ಕ್ರಮ ತೆಗೆದುಕೊಳ್ಳುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲೆಯ ಕೊರಗ ಸಮುದಾಯದಲ್ಲಿರುವ ಶಿಕ್ಷಿತರ ಪಟ್ಟಿಯನ್ನು ಜಿಲ್ಲಾಧಿ ಕಾರಿಗಳು ಪಡೆದುಕೊಳ್ಳಬೇಕು. ಮುಂದೆ ಜಿಲ್ಲಾಮಟ್ಟದ ಪ್ರತಿಯೊಂದು ಇಲಾಖೆಯ ಹೊರಗುತ್ತಿಗೆ ನೇಮಕಾತಿ ಸಂದರ್ಭದಲ್ಲಿ ಕೊರಗ ಸಮುದಾಯದ ವರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಅವರು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡುವ ಎಲ್ಲರಿಗೂ ಅವಕಾಶ ಇದೆ. ನಿಮ್ಮ ನೋವನ್ನು ಅರ್ಥ ಮಾಡಿಕೊಂಡು ಪರಿಹಾರ ಕಂಡುಕೊಳ್ಳಲು ಇಲ್ಲಿಗೆ ಬಂದಿದ್ದೇನೆ. ಆದುದರಿಂದ ಕಳೆದ 10 ದಿನಗಳಿಂದ ನಡೆಸುತ್ತಿರುವ ಈ ಧರಣಿ ಯನ್ನು ಇಲ್ಲಿಗೆ ಕೈಬಿಡಬೇಕು. ಆ ಮೂಲಕ ನಾವೆಲ್ಲ ಜೊತೆಜೊತೆಯಾಗಿ ಸಾಗಬೇಕು ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ಮನವಿ ಮಾಡಿದರು.

ಅದರಂತೆ ಒಕ್ಕೂಟದ ಮುಖಂಡರು ಸಂಜೆ ವೇಳೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಧರಣಿಯನ್ನು ಅಂತ್ಯಗೊಳಿಸಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ, ಎಸ್ಪಿ ಡಾ.ಕೆ.ಅರುಣ್, ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ, ಪ್ರಧಾನ ಕಾರ್ಯದರ್ಶಿ ವಿನಯ ಅಡ್ವೆ, ಖಜಾಂಚಿ ದಿವಾಕರ ಕಳ್ತೂರು ಮುಖಂಡರಾದ ಸಂಜೀವ, ಶೇಖರ್, ಬೊಗ್ರ ಕೊಕ್ಕರ್ಣೆ, ಪುತ್ರನ್ ಹೆಬ್ರಿ, ಪವಿತ್ರ ಮಧುವನ ಮೊದಲಾದವರು ಉಪಸ್ಥಿತರಿದ್ದರು

Latest Indian news

Popular Stories