ಕುಂತಳನಗರ – ಯೋಧ ಮಹಮ್ಮದ್ ಸಲೀಂ ನಿಧನ

ಶಿರ್ವ: ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂತಳನಗರ ನಿವಾಸಿ ಮೊಹಮ್ಮದ್ ಸಲೀಂ(35ವ) ಭಾರತೀಯ ಸೇನೆಯಲ್ಲಿ ಕರ್ತವ್ಯದಲ್ಲಿದ್ದು, ಅನಾರೋಗ್ಯದ ನಿಮಿತ್ತ ಬೆಂಗಳೂರಿನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಶುಕ್ರವಾರ ನಿಧನ ಹೊಂದಿದ್ದಾರೆ.

ಭಾರತೀಯ ಭೂ ಸೇನೆಯ 196 ಆರ್ಟಿ ರೆಜಿಮೆಂಟ್ನ ಜಮ್ಮು-ಕಾಶ್ಮೀರ, ದೆಹಲಿ, ಮತ್ತು ಸಿಕಂದರಾಬಾದ್ನಲ್ಲಿ 14 ವರ್ಷಗಳಿಂದ ಸೇವೆಯಲ್ಲಿದ್ದು, ಪ್ರಸ್ತುತ ಹರಿಯಾಣದಲ್ಲಿ ಕರ್ತವ್ಯದಲ್ಲಿದ್ದರು. ಕಿಡ್ನಿ ವೈಫಲ್ಯದಿಂದ ಅನಾರೋಗ್ಯಕ್ಕೆ ತುತ್ತಾದ ಅವರನ್ನು ಬೆಂಗಳೂರಿನ ಮಿಲಿಟರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ತಾಯಿ ಮತ್ತು ಪತ್ನಿ ಕಿಡ್ನಿ ದಾನ ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಮೃತರು ತಂದೆ, ತಾಯಿ, ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮೃತರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಕಾಪು ತಹಶೀಲ್ದಾರ್ ಡಾ.ಪ್ರತಿಭಾ ಆರ್ ಶನಿವಾರ ಮೃತರ ಮನೆಗೆ ಭೇಟಿ ನೀಡಿ ಯೋಧನ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

ಒಂದೇ ಕುಟುಂಬದಲ್ಲಿ ಮೂವರು ಯೋಧರು:- ಮಣಿಪುರ ದೆಂದೂರುಕಟ್ಟೆ ನಿವಾಸಿ ಮೊಹಮ್ಮದ್ ಹಂಝಾ ಕೋಯಾ ಇವರ ಏಳು ಗಂಡು ಮಕ್ಕಳಲ್ಲಿ ಮೂವರು ಯೋಧರು. ಮೊಹಮ್ಮದ್ ಸಲೀಂ ಯೋಧರಾಗಿ ಹರಿಯಾಣದಲ್ಲಿ ಸೇವೆಯಲ್ಲಿದ್ದು ನಿಧನಹೊಂದಿದ್ದರೆ, ಮೊಹಮ್ಮದ್ ಬುಹ್ರಾನ್ ಸೇನೆಯ ಪಂಜಾಬ್ ತುಕುಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನೊಬ್ಬ ಪುತ್ರ ಮೊಹಮ್ಮದ್ ಅಫಾನ್ ಸೇನೆಗೆ ಆಯ್ಕೆಯಾಗಿದ್ದು, ದೆಹಲಿಯಲ್ಲಿ ಮಿಲಿಟರಿ ತರಬೇತಿ ಪಡೆಯುತ್ತಿದ್ದಾರೆ.

ಇಂದು(ಶನಿವಾರ) ಸಕಲ ಸರಕಾರಿ/ಮಿಲಿಟರಿ ಗೌರವದೊಂದಿಗೆ ಮಣಿಪುರ ಖಬರಸ್ತಾನದಲ್ಲಿ ಯೋಧ ಮೊಹಮ್ಮದ್ ಸಲೀಮ್ರವರ ಅಂತ್ಯ ಸಂಸ್ಕಾರ ನಡೆಯಿತು. ಕುಟುಂಬಸ್ಥರು, ಅಪಾರ ಬಂಧುಗಳು ಪಾಲ್ಗೊಂಡಿದ್ದರು

Latest Indian news

Popular Stories