ಹೆಣ್ಣಿಗೆ ನ್ಯಾಯ ಕೊಡಬೇಕು ಎನ್ನುವ ತಿಮರೋಡಿಗೆ ಮಹಿಳೆಗೆ ಗೌರವ ಕೊಡುವ ಕನಿಷ್ಠ ಪರಿಜ್ಞಾನ ಇಲ್ಲವೆ?: ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ

ಹೆಣ್ಣಿಗೆ ನ್ಯಾಯ ಕೊಡಬೇಕು ಎಂದು ಹೋರಾಟಕ್ಕೆ ಇಳಿದಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಮಹಿಳೆಗೆ ಗೌರವ ಕೊಡುವ ಕನಿಷ್ಠ ಪರಿಜ್ಞಾನ ಇಲ್ಲವೆ? ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಶ್ನಿಸಿದ್ದಾರೆ.

ಸೌಜನ್ಯಾ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಆ.29ರಂದು ಉಡುಪಿಯ ಅಜ್ಜರಕಾಡು ಹುತಾತ್ಮ ಸೈನಿಕರ ಯುದ್ಧ ಸ್ಮಾರಕದ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ, ಕೇಂದ್ರ ಸಚಿವೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಸಹಿತ ಬಿಜೆಪಿ ಹಿರಿಯ ಮುಖಂಡರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ. ಶೋಭಾ ಕರಂದ್ಲಾಜೆಯವರ ಬಗ್ಗೆ ಮಾತನಾಡುವಾಗ ಬಳಸುವ ಪದ ಮತ್ತು ವಿಚಾರದ ಬಗ್ಗೆ ಎಚ್ಚರ ವಹಿಸುವುದು ಸೂಕ್ತ. ತಿಮರೋಡಿ ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವುದನ್ನು ನೋಡಿದರೆ ಇದರಲ್ಲಿ ರಾಜಕೀಯ ವಾಸನೆ ಇರುವುದು ಸ್ಪಷ್ಟವಾಗುತ್ತಿದೆ.

ಸೌಜನ್ಯಾ ಪ್ರಕರಣದ ಮರು ತನಿಖೆ ನಡೆಸುವ ಮೂಲಕ ಸೌಜನ್ಯಾ ಸಾವಿಗೆ ನ್ಯಾಯ ಸಿಗಬೇಕು ಎಂಬ ಹೋರಾಟಕ್ಕೆ ಬಿಜೆಪಿ ಸಂಪೂರ್ಣ ಬೆಂಬಲ ನೀಡುತ್ತಿದೆ. ಆದರೂ ಮಹೇಶ್ ಶೆಟ್ಟಿ ತಿಮರೋಡಿ ಉದ್ದೇಶಪೂರ್ವಕವಾಗಿ ಕೇವಲ ಬಿಜೆಪಿ ಮುಖಂಡರ ತೇಜೋವಧೆಗೈಯುವ ಮೂಲಕ ಹೋರಾಟದ ದಿಕ್ಕು ತಪ್ಪಿಸಲು ಹೊರಟಿರುವುದು ವಿಷಾದನೀಯ.

ಸೌಜನ್ಯಾ ಪರ ಹೋರಾಟವನ್ನು ನೆಪವಾಗಿಟ್ಟುಕೊಂಡು ರಾಜಕೀಯ ತೆವಲಿಗೆ ಜೋತು ಬಿದ್ದಂತಿರುವ ಮಹೇಶ್ ಶೆಟ್ಟಿ ತಿಮರೋಡಿಯ ಹೋರಾಟದ ಕಾಂಟ್ರಾಕ್ಟ್ ಪ್ರಾಯಶಃ ಮುಂದಿನ ಪಾರ್ಲಿಮೆಂಟ್ ಚುನಾವಣೆಗೆ ಮುಗಿಯಲಿದೆ ಎಂದು ಭಾಸವಾಗುತ್ತಿದೆ.

ಸೌಜನ್ಯಾ ಅತ್ಯಾಚಾರ ಮತ್ತು ಸಾವಿಗೆ ನ್ಯಾಯ ಕೊಡಿಸುವ ನೈಜ ಕಾಳಜಿ ಇದ್ದಲ್ಲಿ ತಿಮರೋಡಿ, ವಸ್ತುನಿಷ್ಠ ವಿಚಾರಗಳೊಂದಿಗೆ, ಪ್ರಚಾರದ ಗೀಳಿಗೆ ಜೋತು ಬೀಳದೆ, ಸಾಂವಿಧಾನಿಕ ರೀತಿಯಲ್ಲಿ ನ್ಯಾಯಸಮ್ಮತ ಹೋರಾಟ ಮುಂದುವರಿಸುವುದು ಉತ್ತಮ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories